ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಮತ್ತು ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.
ವಿಧಾನಸಭೆಯಿಂದ ಬಿಜೆಪಿಯ 10 ಮಂದಿ ಶಾಸಕರನ್ನು ಅಮಾನತುಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸ್ಪೀಕರ್ ಯು ಟಿ ಖಾದರ್ ಮಾಹಿತಿ ನೀಡಿದರು. ಈ ವೇಳೆ ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಉಪಸ್ಥಿತರಿದ್ದರು.
ರಾಜ್ಯಪಾಲರ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್, ”ನಿನ್ನೆ ಸದನದಲ್ಲಿ ನಡೆದ ಎಲ್ಲ ವಿಚಾರಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ಸಂಪೂರ್ಣ ವರದಿ ಸಲ್ಲಿಕೆ ಮಾಡಿದ್ದೇನೆ. ರಾಜ್ಯಪಾಲರೂ ಸಹ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ” ಎಂದು ಹೇಳಿದರು.

“ಜುಲೈ 17, 18 ರಂದು ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ದೇಶದ ಪ್ರತಿ ಪಕ್ಷಗಳ ಕಾರ್ಯಕ್ರಮದಲ್ಲಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಗುಮಾಸ್ತರನ್ನಾಗಿ ಮಾಡಿ ಪ್ರೊಟೋಕಾಲ್ ಇಲ್ಲದವರಿಗೂ ಪಿಎ ರೀತಿ ಕೆಲಸ ಮಾಡುವಂತೆ ಮಾಡಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಮಂಡಲ ಅಧಿವೇಶನದಲ್ಲಿ ಗದ್ದಲ ಪ್ರಾರಂಭಿಸಿದ್ದರು.

ಈ ವೇಳೆ ಸದನದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಪೀಠಕ್ಕೆ ಎಸೆದ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಆದೇಶಿಸಿದ ಬಳಿಕ, ಬಿಜೆಪಿ ಸದಸ್ಯರು ಸದನದ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಕೆಲ ಬಿಜೆಪಿ ಸದಸ್ಯರನ್ನು ಭುಜದ ಮೇಲೆ ಹೊತ್ತು ಮಾರ್ಷಲ್‌ಗಳು ಹೊರ ಹಾಕಿದ್ದರು.
ಈ ಸುದ್ದಿ ಓದಿದ್ದೀರಾ? ನಿನ್ನೆ ನಡೆದ ಸದನದ ಘಟನೆ ಪಕ್ಷಾತೀತವಾಗಿ ತಲೆತಗ್ಗಿಸುವ ವಿಚಾರ: ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ
ಸದನದಲ್ಲಿ ಅಗೌರವ ತೋರಿದ ಬಿಜೆಪಿ ಶಾಸಕರಾದ ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್ ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಅವರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.