ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶವ್ಯಾಪಿ ಕರೆಯಾದ ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಹೋರಾಟದ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹನ ಮಾಡಲಾಯಿತು.
ಈ ಸಂದರ್ಭದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ , ಕರ್ನಾಟಕ ಜನಶಕ್ತಿಯ ವಸಂತ್ ಕಾಳೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ 1942 ರ ಸಮಯದಲ್ಲಿ ನಡೆದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಐತಿಹಾಸಿಕ ಹೋರಾಟ ನಡೆದ ದಿನ ಇಂದು. ಈ ಹಿನ್ನೆಲೆಯಲ್ಲಿ ದೇಶದ ದುಡಿಯುವ ಜನರಿಗೆ ಸೇರಬೇಕಾದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂಬ ದೇಶವ್ಯಾಪಿ ಬೃಹತ್ ಹೋರಾಟ ನಡೆಯುತ್ತಿದೆ. ಇಂದು ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಈ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ಜಾರಿಗೆ ತಂದು, ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕೃಷಿಯ – ಕಾರ್ಪೋರೇಟಿಕರಣ ನಿಲ್ಲಿಸಬೇಕು ರೈತ ವಿರೋಧಿ – ವಿದ್ಯುತ್ ಖಾಸಗೀಕರಣ ಮಸೂದೆ ಹಿಂಪಡೆಯಬೇಕು, ಭಾರತದ ಕೃಷಿ ಉತ್ಪಾದನೆ- ಮಾರುಕಟ್ಟೆ-ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರಕಾರದ ಅಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು, ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು, ಕೈಗಾರಿಕೆ- ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಿ, ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಿ, ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಪಾರಸ್ಸಿನಂತೆ ಉತ್ಪಾದನಾ ವೆಚ್ಚ 50% ಬೆಂಬಲ ಬೆಲೆಯನ್ನು ಕಾನೂನಾತ್ಮಕ ಗೊಳಿಸಿ, ಕೃಷಿ ಒಳಸುರಿಗಳ ಮೇಲಿನ ಜಿಎಸ್ಟಿ ಹಿಂಪಡೆಯಿರಿ, ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್ ಗಳನ್ನು ಸಹಕಾರಿ ಸಂಘಗಳ ಮೂಲಕ ನಿರ್ಮಿಸಲು ಸಹಾಯಧನ ನೀಡಬೇಕು, ಅಂತಾರಾಜ್ಯ ನೀರಾವರಿ ಸಮಸ್ಯೆಗಳನ್ನು ಕಾಲಮಿತಿಯೊಳಗಡೆ ಬಗೆಹರಿಸಬೇಕು, ಅರಣ್ಯ ಸಂಪತ್ತನ್ನು ರಕ್ಷಿಸಲು ಪಶ್ಚಿಮಘಟ್ಟದ ರಕ್ಷಣೆಗಾಗಿ ಮಾಧವ ಗಾಡ್ಗೀಳ್ ವರದಿಯನ್ನು ಅನುಷ್ಠಾನ ಗೊಳಿಸಬೇಕು, ಬರ ಹಾಗೂ ಅತಿವೃಷ್ಟಿಯಿಂದ ಕೃಷಿ ಕ್ಷೇತ್ರಕ್ಕಾದ ನಾಶ ನಷ್ಟಕ್ಜೆ ವೈಜ್ಞಾನಿಕ ಪರಿಹಾರ ನೀಡಬೇಕು, ಕೇರಳದ ವಯನಾಡು ಸೇರಿದಂತೆ ಈ ಬಾರಿಯ ಮೇಘಸ್ಪೋಟವನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಪುನರ್ವಸತಿ ಕಲ್ಪಿಸಬೇಕು, ಸರಕಾರಗಳ ಕೃಷಿ ವಿರೋಧಿ ನೀತಿಯಿಂದಾಗಿ ಸಾಲಗಾರರಾದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಫಸಲ್ ಭೀಮಾ ಯೋಜನೆಯಿಂದಾಗಿ ರೈತರಿಗಾದ ಮೋಸ ಹಾಗೂ ಖಾಸಗಿ ವಿಮಾ ಕಂಪನಿಗಳ ಹಗಲು ದರೋಡೆ ನಿಲ್ಲಿಸಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು, ಇಲ್ಲದಿದ್ದರೆ ಬೃಹತ್ ಹೋರಾಟಗಳಿಗೆ ರೈತ ಕೃಷಿ ಕಾರ್ಮಿಕರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎ ಐ ಕೆ ಕೆ ಎಂ ಎಸ್ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ , ರಾಜ್ಯ ರೈತ ಸಂಘದ ದ್ಯಾವಣ್ಣ ಜನಶಕ್ತಿಯ ಜಿಲ್ಲಾ ಸದಸ್ಯ ಅಪ್ಪಾಜಿ, ಹೊನ್ನೂರಪ, ಸೇರಿದಂತೆ ಇತರರು ಇದ್ದರು

