73ರ ಹಿರಿಯ ವ್ಯಕ್ತಿ ಜಗದೀಪ್ ಧನಖರ್ ಈಗ, ತಮ್ಮ ಸಾಧಕ ಬದುಕನ್ನು ತಾವೇ ಮರೆತು ವಿರೋಧ ಪಕ್ಷದ ಸದಸ್ಯರೊಂದಿಗೆ ಜಟಾಪಟಿಗಿಳಿದಿದ್ದಾರೆ. ಅತಿರೇಕದ ವರ್ತನೆಗಳಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮನ್ನು ತಾವೇ ಅಸಮರ್ಥ ಎಂದು ಹೇಳಿಕೊಂಡು, ಸಭಾಪತಿ ಸ್ಥಾನದ ಘನತೆ, ಗೌರವವನ್ನು ಹರಾಜು ಹಾಕುತ್ತಿದ್ದಾರೆ.
ಆಗಸ್ಟ್ 8ರಂದು, ದೇಶದ ಮೇಲ್ಮನೆ, ಚಿಂತಕರ ಚಾವಡಿ ಎಂದೇ ಹೆಸರಾದ ರಾಜ್ಯಸಭೆ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಸಭಾಪತಿ ಜಗದೀಪ್ ಧನಖರ್ ಅವರು ‘ಸದನದಲ್ಲಿ ಅರಾಜಕತೆ ಸೃಷ್ಟಿಸಿ, ಸಭಾಪತಿ ಸ್ಥಾನದ ಘನತೆಗೆ ಅಗೌರವ ತೋರಿದ ವಿರೋಧ ಪಕ್ಷಗಳ ನಡೆಯು ಎಲ್ಲ ಮಿತಿಗಳನ್ನೂ ಮೀರಿದೆ’ ಎಂದು ಕೊಂಚ ಸಿಟ್ಟಿನಿಂದ ಕುರ್ಚಿ ಬಿಟ್ಟು ಕೆಳಗಿಳಿದು, ಹೊರನಡೆದರು.
ಸದಸ್ಯರು ವಾಕ್ ಔಟ್ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಸಭಾಪತಿಗಳೇ ವಾಕ್ ಔಟ್ ಮಾಡಿ ದೇಶದ ಜನತೆಯ ಹುಬ್ಬೇರುವಂತೆ ಮಾಡಿದ್ದರು.
ಇದು ರಾಜ್ಯಸಭೆಯಲ್ಲಿ ಆಸೀನರಾಗಿದ್ದ ಗೌರವಾನ್ವಿತ ಸಂಸತ್ ಸದಸ್ಯರಲ್ಲಿ ಗೊಂದಲ ಉಂಟುಮಾಡಿತು. ಏನು ನಡೆಯುತ್ತಿದೆ ಎಂಬುದು ತಿಳಿಯದೆ, ಸದನ ಗದ್ದಲದ ಗೂಡಾಯಿತು. ಸಭಾಪತಿಗಳೆಂದರೆ, ಹಿರಿಯರು, ಅನುಭವಿಗಳು, ಸಂಸದೀಯ ಕಾನೂನು ಮತ್ತು ನಡವಳಿಕೆಗಳನ್ನು ಅರೆದು ಕುಡಿದವರು. ಎಲ್ಲರ ಮಾತುಗಳನ್ನು ಸಹನೆಯಿಂದ ಆಲಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ, ಆರೋಗ್ಯಕರ ಚರ್ಚೆಗೆ ಆಸ್ಪದ ನೀಡಿ, ಅದು ರಾಷ್ಟ್ರದ ಒಳಿತಿಗೆ ವಿನಿಯೋಗವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಬಹಳ ಮುಖ್ಯವಾದ, ಮಹತ್ವವಾದ ಸ್ಥಾನದಲ್ಲಿ ಕೂತವರು.
ಅಂತಹ ಸಭಾಪತಿಗಳ ಮುಂದೆ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು, ಫೋಗಟ್ ಅವರನ್ನು ಅನರ್ಹಗೊಳಿಸಿದ ವಿಷಯ ಪ್ರಸ್ತಾಪಿಸಲು ಮುಂದಾದರು. ಆದರೆ, ಅದಕ್ಕೆ ಧನಕರ್ ಅವಕಾಶ ನೀಡಲಿಲ್ಲ. ಆದರೂ ತಾಳ್ಮೆ ಕಳೆದುಕೊಳ್ಳದ ಖರ್ಗೆಯವರು, ‘ಇದು ಮುಖ್ಯವಾದ ಸಂಗತಿ. ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಅಲ್ಲ. ಅನರ್ಹತೆಯ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದೂ ಹೇಳಿದರು. ಆದರೆ, ಈ ವಿಷಯ ಪ್ರಸ್ತಾಪಿಸಲು ಖರ್ಗೆ ಅವರಿಗೆ ಸಭಾಪತಿಗಳು ಅವಕಾಶ ನೀಡಲಿಲ್ಲ. ನಿಗದಿಯಂತೆ ಶೂನ್ಯ ವೇಳೆಯ ಕಲಾಪಗಳನ್ನು ನಡೆಸಲು ಮುಂದಾದರು.
ಇದರಿಂದ ಕೊಂಚ ಕಸಿವಿಸಿಗೊಳಗಾದ ಟಿಎಂಸಿ ನಾಯಕ ಡರೆಕ್ ಒಬ್ರಯಾನ್ ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದರು. ಆದರೆ ಸದನದಲ್ಲಿ ನಡೆಯುತ್ತಿದ್ದ ಗದ್ದಲದ ಪರಿಣಾಮವಾಗಿ ಅವರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಲಿಲ್ಲ. ‘ನೀವು ಸಭಾಪತಿಯನ್ನು ಉದ್ದೇಶಿಸಿ ಅರಚುತ್ತಿದ್ದೀರಿ. ನಿಮ್ಮ ನಡತೆಯು ಸದನದಲ್ಲಿ ಅತ್ಯಂತ ಕೊಳಕಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಮುಂದಿನ ಬಾರಿ ನಿಮ್ಮನ್ನು ಹೊರಹಾಕಬೇಕಾಗುತ್ತದೆ’ ಎಂದು ಒಬ್ರಯಾನ್ ಅವರನ್ನು ಉದ್ದೇಶಿಸಿ ಏರುದನಿಯಲ್ಲಿ ಸಭಾಪತಿಗಳು ಕೂಗಾಡಿದರು. ಅಷ್ಟೇ ಅಲ್ಲ, ಬಿರುಸಿನ ವಾಗ್ವಾದದ ನಡುವೆಯೇ ಸಭಾಪತಿ ಧನಖರ್ ಅವರು ಸದನದಿಂದ ಹೊರನಡೆದರು. ಅವರ ಹಿಂದೆಯೇ ವಿರೋಧ ಪಕ್ಷಗಳ ಸದಸ್ಯರೂ ಸಭಾತ್ಯಾಗ ಮಾಡಿದರು.
ಕೆಲ ಸಮಯದ ನಂತರ ಸದನಕ್ಕೆ ಮರಳಿದ ಸಭಾಪತಿ ಧನಖರ್, ‘ನಾನು ಆತ್ಮಾವಲೋಕನದ ಉದ್ದೇಶದಿಂದ ಹೊರನಡೆದೆ. ಇಲ್ಲಿ ನಡೆದಿದ್ದು ಹಿಂದೆಂದೂ ಆಗಿರದಂಥದ್ದು. ಅದನ್ನು ಜೀರ್ಣಿಸಿಕೊಳ್ಳಲು ಆಗದು’ ಎಂದರು. ಸ್ವಲ್ಪ ಸಾವರಿಸಿಕೊಂಡು, ‘ಅವರು ಸವಾಲು ಹಾಕುತ್ತಿರುವುದು ನನಗಲ್ಲ. ಸದನದ ಸಭಾಪತಿ ಹುದ್ದೆಗೆ. ಈ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯು ಅಸಮರ್ಥ ಎಂದು ಅವರು ಭಾವಿಸಿದ್ದಾರೆ’ ಎಂದು ಧನಖರ್ ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ?: ಮಾಜಿ ಸಿಎಂ ಕುಮಾರಸ್ವಾಮಿ ಅನುಮೋದಿಸಿದ್ದ ಬೋಗಸ್ ಕಂಪನಿಯ ಇತಿಹಾಸ
ಸಭಾಪತಿ ಸ್ಥಾನದಲ್ಲಿ ಕೂತವರೇ ಹೀಗೆ, ತಮ್ಮನ್ನು ತಾವು ಅಸಮರ್ಥ ಎಂದು ಭಾವಿಸುವ ಸಂದರ್ಭ ಸೃಷ್ಟಿಯಾಗಿದ್ದು ವಿಪರ್ಯಾಸಕರ ಸಂಗತಿ. ವಿನೇಶ್ ಫೋಗಟ್ ದೇಶಕ್ಕಾಗಿ ಆಡುತ್ತಿರುವ ಆಟಗಾರ್ತಿ. ಆಕೆಗೆ ಒಲಿಂಪಿಕ್ಸ್‌ನಲ್ಲಿ ಆಗಿರುವ ಅನ್ಯಾಯ ಕುರಿತು ಸಂಸತ್ತಿನಲ್ಲಿ ದನಿ ಎತ್ತಿದರೆ, ಅದನ್ನು ಸಭಾಪತಿ ಧನಖರ್ ಅವರು ಚರ್ಚೆಗೆ ಆಸ್ಪದ ನೀಡದೆ, ಹತ್ತಿಕ್ಕಲು ನೋಡಿದ್ದು ನ್ಯಾಯಸಮ್ಮತವಲ್ಲ. ಬದಲಿಗೆ, ಫೋಗಟ್ ಅನರ್ಹತೆಗೆ ಸಭಾಪತಿಗಳೇ ಕಾರಣವೇನೋ ಎಂಬ ಅನುಮಾನ ಹುಟ್ಟಿಸುತ್ತಿತ್ತು. ಅದಕ್ಕೆ ಅವರ ವರ್ತನೆ ಪುಷ್ಟೀಕರಿಸುತ್ತಿತ್ತು.
ಕುಸ್ತಿಪಟು ವಿನೇಶ್ ಫೋಗಟ್ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ದೆಹಲಿಯ ಬೀದಿಗಳಲ್ಲಿ ಧರಣಿ ಕೂತಿದ್ದರು. ಪ್ರಧಾನಿ ಮೋದಿಯವರಲ್ಲಿ ನ್ಯಾಯಕ್ಕಾಗಿ ಮೊರೆಯಿಟ್ಟು, ಮನವಿ ಮಾಡಿಕೊಂಡಿದ್ದರು. ಈ ಬ್ರಿಜ್ ಭೂಷಣ್ ಸಿಂಗ್ ಬಿಜೆಪಿಯ ಸಂಸದ. ಆ ಕಾರಣಕ್ಕಾಗಿ ಪ್ರಧಾನಿ ಮೋದಿಯವರು, ಬೇಟಿ ಪಡಾವೋ, ಬೇಟಿ ಬಚಾವೋ ಎಂದು ದೊಡ್ಡ ಗಂಟಲಿನಲ್ಲಿ ಭಾಷಣ ಬಿಗಿಯುತ್ತಿದ್ದರೆ ಹೊರತು, ಬೇಟಿಯನ್ನು ಬಚಾವು ಮಾಡಲು ಮುಂದಾಗಲಿಲ್ಲ. ಬದಲಿಗೆ ಅತ್ಯಾಚಾರಿಯ ಪರ ನಿಂತು, ಕುಸ್ತಿಪಟುಗಳನ್ನು ಅವಮಾನಿಸಿದರು.
ಪ್ರಧಾನಿಗಳೇನೋ ತಮ್ಮ ಪಕ್ಷದ ಸಂಸದನ ಪರ ನಿಂತು, ಮಹಿಳೆಯರ ಬಗೆಗಿನ ತಮ್ಮ ‘ಕಾಳಜಿ-ಕಳಕಳಿ’ಗಳನ್ನು ಬಟಾಬಯಲು ಮಾಡಿಕೊಂಡರು. ಆದರೆ, ಈ ಸಭಾಪತಿ ಜಗದೀಪ್ ಧನಖರ್‍ಗೆ ಯಾವ ರಾಜಕೀಯ ಹಿತಾಸಕ್ತಿಗಳಿದ್ದವು?
ಸಭಾಪತಿ ಜಗದೀಪ್ ಅವರ ‘ವಿವೇಕಯುತ’ ನಡೆ ಇದೊಂದೇ ಅಲ್ಲ, ಈ ಹಿಂದೆಯೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಜೊತೆಯಲ್ಲಿ, ಅದರ ಹಿಂದಕ್ಕೆ ಪಿ. ಚಿದಂಬರಂ ಹೇಳಿಕೆ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿಯೇ ಕೂಗಾಡಿದ್ದರು. ಅದಕ್ಕೂ ಹಿಂದೆ, ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗೆ ಕಾದಾಟಕ್ಕಿಳಿದು, ಸುದ್ದಿಯಾಗಿದ್ದರು. ಆ ಮೂಲಕ ಸ್ಥಾನ ಕಲ್ಪಿಸಿದವರ ಋಣ ತೀರಿಸಿದ್ದರು.
ಇಂದು, ಆ. 9ರ ಶುಕ್ರವಾರ ಸಮಾಜವಾದಿ ಸಂಸದೆ ಜಯಾ ಬಚ್ಚನ್ ಅವರನ್ನು ‘ಜಯಾ ಅಮಿತಾಭ್ ಬಚ್ಚನ್’ ಎಂದು ಉಲ್ಲೇಖಿಸಿದ್ದಾರೆ. ಆ ತಕ್ಷಣವೇ ಜಯಾ ಬಚ್ಚನ್ ಎದ್ದು ನಿಂತು, ‘ಕ್ಷಮಿಸಿ, ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ’ ಎಂದು ಸಹನೆಯಿಂದಲೇ ತಿದ್ದಿದ್ದಾರೆ. ಇಷ್ಟಾದರೂ ತಪ್ಪು ತಿದ್ದಿಕೊಳ್ಳದ ಧನಖರ್, ‘ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ ನೀವು ಇಲ್ಲಿನ ಶಿಷ್ಟಾಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಉದ್ಧಟತನ ಮೆರೆದಿದ್ದಾರೆ. ಸಿಟ್ಟಾದ ಜಯಾ ಬಚ್ಚನ್, ʼನಾನೊಬ್ಬಳು ಕಲಾವಿದೆ. ದೇಹಭಾಷೆ ಮತ್ತು ಅಭಿವ್ಯಕ್ತಿ ನನಗೆ ಅರ್ಥವಾಗುತ್ತದೆ. ನಿಮ್ಮ ಟೋನ್ ಸರಿಯಲ್ಲ, ಕ್ಷಮೆ ಕೇಳಬೇಕು. ನೀವು ಸಭಾಪತಿ ಪೀಠದಲ್ಲಿ ಕುಳಿತಿರಬಹುದು. ಆದರೆ ನಾವು ನಿಮ್ಮ ಸಹೋದ್ಯೋಗಿಗಳು ಎಂಬುದನ್ನು ಮರೆಯಬೇಡಿʼ ಎಂದಾಗ ಜಗದೀಪ್ ಅತಿರೇಕದಿಂದ ವರ್ತಿಸಿದ್ದಾರೆ. ಇಬ್ಬರ ಮಾತಿನ ಚಕಮಕಿ ತಾರಕಕ್ಕೇರಿ ಸದನ ಕದನವಾದಾಗ, ಸೋನಿಯಾ ಗಾಂಧಿ ಮಧ್ಯೆ ಪ್ರವೇಶಿಸಿ ಸಮಾಧಾನ ಮಾಡಿದ್ದಾರೆ. ನಂತರ ವಿರೋಧಪಕ್ಷಗಳು ಜಯಾ ಬಚ್ಚನ್ ಅವರಿಗೆ ಬೆಂಬಲ ಸೂಚಿಸಿ, ಸದನದಿಂದ ಹೊರನಡೆದಿವೆ.
ಕಳೆದವಾರವಷ್ಟೇ ‘ಜಯಾ ಅಮಿತಾಭ್ ಬಚ್ಚನ್’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಜಯಾ ಬಚ್ಚನ್, ‘ನನ್ನನ್ನ ಜಯಾ ಬಚ್ಚನ್ ಎಂದಷ್ಟೇ ಕರೆಯಿರಿ’ ಎಂದು ಸ್ಪಷ್ಟನೆ ನೀಡಿದ್ದರು. ಆದರೂ, ಧನಖರ್ ಮತ್ತದೇ ಉಲ್ಲೇಖ ಮಾಡುತ್ತಾರೆಂದರೆ, ಅದು ಕುಚೋದ್ಯವಲ್ಲವೇ? ಸಭಾಪತಿ ಸ್ಥಾನದ ದುರುಪಯೋಗವಲ್ಲವೇ?
ಒಟ್ಟಾರೆ, ಸಭಾಪತಿ ಧನಖರ್ ಹಾಗೂ ವಿರೋಧ ಪಕ್ಷಗಳ ಸಂಸದರ ನಡುವಿನ ತಿಕ್ಕಾಟ ಮೇರೆ ಮೀರಿದೆ. ಧನಖರ್ ವಿರುದ್ಧ ಮೂರು ಪುಟಗಳ ವಾಗ್ದಂಡನೆ ಅರ್ಜಿ ಸಲ್ಲಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಈ ಪತ್ರಕ್ಕೆ ಇಂಡಿಯಾ ಒಕ್ಕೂಟದ 67 ಸಂಸದರು ಸಹಿ ಹಾಕಿದ್ದಾರೆ. ಈ ಜಟಾಪಟಿ, ಯಾವ ಹಂತಕ್ಕೆ ಹೋಗುತ್ತದೋ, ಕಾದು ನೋಡಬೇಕು.
ಯಾರೀ ಜಗದೀಪ್?
1951ರ ಮೇ 18ರಂದು ರಾಜಸ್ಥಾನದ ಕಿತಾನ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಜಗದೀಪ್ ಧನಖರ್, ಜಾಟ್ ಸಮುದಾಯಕ್ಕೆ ಸೇರಿದ ಕೃಷಿಕ ಕುಟುಂಬದಿಂದ ಬಂದವರು. ಶಾಲಾ ಶಿಕ್ಷಣವನ್ನು ಸೈನಿಕ ಶಾಲೆಯಿಂದ ಆರಂಭಿಸಿ, ಜೈಪುರದ ರಾಜಸ್ಥಾನ ವಿವಿಯಲ್ಲಿ ವಿಜ್ಞಾನ ಪದವಿ ಪಡೆದವರು. ಆನಂತರ ಎಲ್ಎಲ್‌ಬಿ ಪೂರ್ಣಗೊಳಿಸಿದವರು.
1979ರಲ್ಲಿ ರಾಜಸ್ಥಾನದ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವಕೀಲರಾಗಿ ವೃತ್ತಿಜೀವನ ಆರಂಭಿಸಿದ ಧನಖರ್, 1990ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ಹಿರಿಯ ವಕೀಲರಾದರು. ಬಾರ್ ಅಸೋಸಿಯೇಷನ್ ಅಧ್ಯಕ್ಷರಾದರು. ಸುಪ್ರೀಂ ಕೋರ್ಟಿನಲ್ಲೂ ತಮ್ಮ ಛಾಪು ಒತ್ತಿದರು.
1989ರಲ್ಲಿ ರಾಜಕೀಯಕ್ಕೆ ಧುಮುಕಿ, ರಾಜಸ್ಥಾನದ ಜುಂಜುನುದಿಂದ ಜನತಾ ದಳದ ಅಭ್ಯರ್ಥಿಯಾಗಿ ಲೋಕಸಭಾ ಸದಸ್ಯರಾದರು. ಪ್ರಧಾನಿ ಚಂದ್ರಶೇಖರ್ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಮುಂದೆ ಜನತಾ ದಳ ತೊರೆದು ಕಾಂಗ್ರೆಸ್ ಸೇರಿದ ಧನಖರ್, 1993ಲ್ಲಿ ಕಿಶನ್‌ಗಢ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಶಾಸಕರ ಅವಧಿ ಮುಗಿಯುವಷ್ಟರಲ್ಲಿ, 1998ರಲ್ಲಿ ಜುಂಜುನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಧನಖರ್, ಹೀನಾಯವಾಗಿ ಸೋತರು. ಆನಂತರ ಅವರು, 2003ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದರು. ಬಿಜೆಪಿ ಧನಖರ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ, ಕಾನೂನು ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿತು.
2019ರಲ್ಲಿ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗುತ್ತಿದ್ದಂತೆ, ಜಗದೀಪ್ ಧನಖರ್ ಅವರನ್ನು ಪಶ್ಚಿಮ ಬಂಗಾಲದ ರಾಜ್ಯಪಾಲರನ್ನಾಗಿ ನೇಮಿಸಿದರು. ಆದರೆ ಆಡಳಿತಾರೂಢ ತೃಣಮೂಲ್ ಕಾಂಗ್ರೆಸ್ಸಿನೊಂದಿಗೆ ಪ್ರತಿದಿನ ಒಂದಿಲ್ಲೊಂದು ತಗಾದೆ ತೆಗೆದು ಸುದ್ದಿಯಾಗತೊಡಗಿದರು. ಅದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆ ಇಲ್ಲವೆಂಬ ಕಾರಣಕ್ಕೋ ಅಥವಾ ಮಮತಾ ಬ್ಯಾನರ್ಜಿಯವರು, ಮೋದಿಯವರನ್ನು ನೇರಾನೇರ ಟೀಕಿಸಿ ಮುಜುಗರಕ್ಕೀಡುಮಾಡುತ್ತಿದ್ದರೆಂಬುದಕ್ಕೋ- ಧನಖರ್ ಕೂಡ ಪಕ್ಷದ ವಕ್ತಾರರಂತೆ ವರ್ತಿಸಿ ನಗೆಪಾಟಲಿಗೀಡಾದರು. ಕೊನೆಗೆ ಅತಿರೇಕಕ್ಕೆ ಹೋದಾಗ, ಜೂನ್ 17, 2022ರಂದು ರಾಜ್ಯಪಾಲದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮಾರನೇ ದಿನವೇ, ಪ್ರಧಾನಿ ಮೋದಿಯವರೊಂದಿಗೆ ತೆರಳಿ, ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದರು. ಅತ್ಯಧಿಕ ಮತಗಳಿಂದ ಗೆದ್ದು ಉಪರಾಷ್ಟ್ರಪತಿಯೂ ಆದರು.
ಉಪರಾಷ್ಟ್ರಪತಿ ಎನ್ನುವುದು ಗೌರವಾನ್ವಿತ ಹುದ್ದೆ. ರಾಷ್ಟ್ರಪತಿ ಸ್ಥಾನಕ್ಕೆ ಮತ್ತೊಂದೇ ಮೆಟ್ಟಿಲು. ಆದರೆ ಅದನ್ನು ದಯಪಾಲಿಸಿದ್ದು ಮೋದಿಯವರು ಎಂಬ ಕಾರಣಕ್ಕೆ ಜಗದೀಪ್ ಧನಖರ್, ಸಾರ್ವಜನಿಕವಾಗಿ ಮೋದಿಯವರ ಕಾಲಿಗೆ ಬಿದ್ದಿಲ್ಲ; ಬೇರೆಲ್ಲವನ್ನೂ ಮಾಡಿದ್ದಾರೆ. ಅವರು ನೋಡದಿದ್ದರೂ ಅವರ ಮುಂದೆ ನಡು ಬಗ್ಗಿಸಿ ನಿಂತಿದ್ದಾರೆ. ಅವರು ನೋಡಿ ನಿರ್ಲಕ್ಷಿಸಿದರೂ, ನಗುನಗುತ್ತಲೇ ಕೈಮುಗಿದಿದ್ದಾರೆ. ನೋಡುಗರಿಗೆ ಅಸಹ್ಯ ಮೂಡಿಸಿದ್ದಾರೆ. ಮಾನವಂತರಲ್ಲಿ ಮುಜುಗರ ಉಂಟಾಗುವಂತೆ ವರ್ತಿಸಿದ್ದಾರೆ.
ಈಗ, ರಾಜ್ಯಸಭೆಯಲ್ಲಿ, ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆಯಲ್ಲಿ ಸಭಾಪತಿ ಸ್ಥಾನ ಅಲಂಕರಿಸಿರುವ ಜಗದೀಪ್ ಧನಖರ್, ವಕೀಲ, ಶಾಸಕ, ಸಂಸದ, ಸಚಿವ, ರಾಜ್ಯಪಾಲ, ಉಪರಾಷ್ಟ್ರಪತಿಯಾಗಿ ಹೆಸರು ಮಾಡಿದವರು. ಜನತಾದಳ, ಕಾಂಗ್ರೆಸ್ ಪಕ್ಷಗಳಲ್ಲಿದ್ದು ಈಗ ಬಿಜೆಪಿಗೆ ಬಂದವರು. 73ರ ಹಿರಿಯ ವ್ಯಕ್ತಿ ಈಗ, ತಮ್ಮ ಸಾಧಕ ಬದುಕನ್ನು ತಾವೇ ಮರೆತು ವಿರೋಧ ಪಕ್ಷದ ಸದಸ್ಯರೊಂದಿಗೆ ಜಟಾಪಟಿಗಿಳಿದಿದ್ದಾರೆ. ತಮ್ಮನ್ನು ತಾವೇ ಅಸಮರ್ಥ ಎಂದು ಹೇಳಿಕೊಂಡಿದ್ದಾರೆ. ಸಭಾಪತಿ ಸ್ಥಾನದ ಘನತೆ, ಗೌರವವನ್ನು ಹರಾಜು ಹಾಕಿದ್ದಾರೆ.
ದೇಶದ ರಾಜಕೀಯ ಇತಿಹಾಸ ಬಲ್ಲವರು ಈ ಹಿಂದೆ ಸಭಾಪತಿ ಸ್ಥಾನದಲ್ಲಿ ಕೂತ- ಸರ್ವಪಲ್ಲಿ ರಾಧಾಕೃಷ್ಣನ್, ವಿ.ವಿ.ಗಿರಿ, ಆರ್. ವೆಂಕಟರಾಮನ್, ಕೆ.ಆರ್. ನಾರಾಯಣನ್, ಹಮೀದ್ ಅನ್ಸಾರಿಗಳಂತಹ ಮೇಧಾವಿಗಳನ್ನು ಕಂಡಿದ್ದಾರೆ. ಅವರು ಹಾಕಿಕೊಟ್ಟ ಮಾದರಿಯನ್ನು ಇಂದಿಗೂ ಮೆಲುಕು ಹಾಕುತ್ತಾರೆ. ಅಂತಹ ಮಹೋನ್ನತ ಸ್ಥಾನದಲ್ಲಿ ಇಂದು ಬೆನ್ನುಮೂಳೆಯಿಲ್ಲದ ಜಗದೀಪ್ ಧನಖರ್ ಕೂತಿದ್ದಾರೆ. ತಮ್ಮ ಅರ್ಹತೆ-ಯೋಗ್ಯತೆಗಳನ್ನು ತಾವೇ ಕಡೆಗಣಿಸಿ, ಸ್ಥಾನ ಕರುಣಿಸಿದ ಮೋದಿಯನ್ನು ಮಹಾತ್ಮನೆಂದು ಬಣ್ಣಿಸಿ, ಆರ್‍ಎಸ್ಎಸ್ಸನ್ನು ಹಾಡಿ ಹೊಗಳುತ್ತಿದ್ದಾರೆ. ಸಭಾಪತಿ ಸ್ಥಾನಕ್ಕೆ ಚ್ಯುತಿ ತರುತ್ತಿದ್ದಾರೆ. ಇದಲ್ಲವೇ ದೇಶದ ದುರಂತ?
ಲೇಖಕ, ಪತ್ರಕರ್ತ
ಸರಿಯಾದ ವಿಮರ್ಶೆ