ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಹಾಗೂ ಹಾರ್ಮೋನಿಯಂ ಮೇಷ್ಟ್ರು ಮುದ್ದಟ ನೂರು ತಿಪ್ಪೇಸ್ವಾಮಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮದಲ್ಲಿ ‘ಕನ್ನಡಕ್ಕಾಗಿ ನಾವು’ ಅಭಿಯಾನದಡಿ ಮೋಕಾ ಗ್ರಾಮದಲ್ಲಿ ಬಯಲಾಟ ಪ್ರದರ್ಶನ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಇಲಾಖೆಯಿಂದ ಹಣ ಪಡೆದಿದ್ದಾರೆ ಎಂದು ಹಿರಿಯ ಕಲಾವಿದ ಹಾಗೂ ರಂಗ ನಿರ್ದೇಶಕರಾದ ಜಗದೀಶ್ ಅವರು ದೂರು ನೀಡಿದ್ದಾರೆ.
ಈ ಸಂಬಂಧ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್ ಅವರಿಗೆ ಜಗದೀಶ್ ಅವರು ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಜಗದೀಶ್ ಅವರು ಮಾತನಾಡಿದ್ದು, “ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಇತ್ತೀಚೆಗೆ ಶಂಕರ ಬಂಡೆ ಯಲ್ಲನ ಗೌಡರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಗಿದೆ. ಅದರ ಕಾರ್ಯದರ್ಶಿಯಾಗಿರುವ ಮುದ್ದಟ ನೂರು ತಿಪ್ಪೇಸ್ವಾಮಿ ಅವರು ಮೋಕಾ ಗ್ರಾಮದಲ್ಲಿ ಬಯಲಾಟ ಪ್ರದರ್ಶನ ಮಾಡಿರುವುದಾಗಿ ಹೇಳಿ ಬೇರೆ ಊರಿನ ಹಳೆಯ ಫೋಟೋ ನೀಡಿ ಹಣ ಪಡೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಕಲಿ ದಾಖಲೆ ಸಲ್ಲಿಸಿ ವಂಚನೆ ಮಾಡಿದ್ದಾರೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಕೋಚಿಮುಲ್ ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ನಾಟಕ ಮಂಡಳಿ : ಕೆ ವಿ ನಾಗರಾಜು ಆರೋಪ
“ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿರುವ ದಾಖಲೆಗಳನ್ನು ಗಮನಿಸಿದಾಗ ಯಾವುದೋ ಕಲಾ ಟ್ರಸ್ಟ್ ಪ್ರಾಯೋಜಿತ ಕಾರ್ಯಕ್ರಮ ಏರ್ಪಡಿಸಿದ ವಿವರ ಬ್ಯಾನರಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆ ಫೋಟೋದಲ್ಲಿರುವ ದಿನಾಂಕವೇ ಬೇರೆಯಾಗಿದ್ದು, 27.10.2021 ದಿನಾಂಕದ ಬಯಲಾಟಕ್ಕೆ 05.12.2021 ದಿನಾಂಕದ ಫೋಟೋ ಸಲ್ಲಿಸಿ ಇಲಾಖೆಗೆ ವಂಚಿಸಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು” ಎಂದು ರಂಗ ನಿರ್ದೇಶಕ ಕೆ. ಜಗದೀಶ್, ಸಹಾಯಕ ನಿರ್ದೇಶಕರಾದ ಬಿ. ನಾಗರಾಜ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
