ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊಸಪಾಳ್ಯ ಸದಸ್ಯ ರಂಗರಾಜು 14 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಈ ಹಿಂದೆ ಜಯಮ್ಮ ರಾಜೀನಾಮೆ ನೀಡಿದ ಹಿನ್ನಲೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
ಸಾಮಾನ್ಯ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ರಂಗರಾಜು ಹಾಗೂ ರಾಮೇಗೌಡ ನಾಮಪತ್ರ ಸಲ್ಲಿಸಿದರು. ಒಟ್ಟು 18 ಸದಸ್ಯರ ಮತಯಾಚನೆ ಪ್ರಕ್ರಿಯೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗಿ ರಂಗರಾಜು 14 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ರಾಮೇಗೌಡ 4 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದರು.
ನೂತನ ಉಪಾಧ್ಯಕ್ಷ ರಂಗರಾಜು ಸುದ್ದಿಗಾರರ ಜೊತೆ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಬದ್ಧನಾಗಿರುತ್ತೇನೆ. ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಕೆಲಸ ಮಾಡಿ ನೀರು, ರಸ್ತೆ, ಚರಂಡಿ, ಸ್ವಚ್ಚತೆ, ವಸತಿ, ಬೀದಿ ದೀಪ ಹೀಗೆ ಎಲ್ಲಾ ಸವಲತ್ತು ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಜಯಮ್ಮ, ಅಶ್ವತ್ಥೆಗೌಡ, ಶಿವಣ್ಣ, ತುಳಸಿದಾಸ್, ಅನಿತಾ ಶ್ರೀನಿವಾಸ್, ವೆಂಕಟಲಕ್ಷ್ಮಮ್ಮ, ಸಿದ್ದಯ್ಯ, ನಾಗರಾಜು, ಖಲಂದರ್, ಗಂಗನರಸಮ್ಮ, ಚಂದ್ರು, ಭಾರತಿ, ನೀಲಮ್ಮ, ಅಂಬುಜಮ್ಮ, ಮಂಜಮ್ಮ, ಜಯಮ್ಮ, ಶ್ವೇತಾ, ಮಾಜಿ ಅಧ್ಯಕ್ಷ ಗಿರೀಶ್, ಪಿಡಿಓ ಮಂಜುಳಾ ಪಾಟೀಲ್, ನಿಟ್ಟೂರು ಕಂದಾಯ ನಿರೀಕ್ಷಕ ಮೋಹನ್ ಕುಮಾರ್ ಇತರರು ಇದ್ದರು.