ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್‌ವೊಂದು ಹಳ್ಳದಲ್ಲಿ ಮಗುಚಿ ಬಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿದ್ದ ಕಾರ್ಮಿಕರು ಈಜಿಕೊಂಡು ತಮ್ಮ ಜೀವ ಉಳಿಸಿಕೊಂಡಿರುವುದಾಗಿ ವರದಿಯಾಗಿದೆ.
ತೋರಣಗಲ್ಲು ಹೋಬಳಿಯಿಂದ ಜಿಂದಾಲ್ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್‌ವೊಂದು ಹಳ್ಳದಲ್ಲಿ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ಇತ್ತಾದರೂ, ಕಾರ್ಯಾಚರಣೆ ನಡೆಸಿದ ಬಳಿಕ ಎಲ್ಲರೂ ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೋರಣಗಲ್ಲು ಹೋಬಳಿಯ ವಿಠಲಾಪುರ, ಮೆಟ್ರಿಕಿ, ರಾಜಾಪುರ, ಅಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಭಾರೀ ಮಳೆಯಾಗಿದ್ದರಿಂದ ಸಮೀಪದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಜಿಂದಾಲ್ ’10 ಎಂಟಿ’ ಗೇಟ್ ಬಳಿಯ ಹಳ್ಳದ ಪಕ್ಕದಲ್ಲಿ ವಾಸವಿರುವ ಕಾರ್ಮಿಕರು ಎಂದಿನಂತೆ ಟ್ರ್ಯಾಕ್ಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಖಂಡಿಸಿ ಪ್ರತಿಭಟನೆ
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಮುಳುಗು ತಜ್ಞರು ಆಗಮಿಸಿ, ಮುಗುಚಿ ಬಿದ್ದ ಟ್ರ್ಯಾಕ್ಟರ್ ಶೋಧ ಕಾರ್ಯ ನಡೆಸಿದರು. ದುರ್ಘಟನೆಯ ವೇಳೆ ಟ್ರ್ಯಾಕ್ಟರ್‌ನಲ್ಲಿ ಸುಮಾರು 14 ಮಂದಿ ಕಾರ್ಮಿಕರು ಇದ್ದರು ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ತೋರಣಗಲ್ಲು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಕೇಶ್, “ಘಟನೆಯ ಸಂದರ್ಭದಲ್ಲಿ ಟ್ರ್ಯಾಕ್ಟರ್‌ನಲ್ಲಿ 14 ಮಂದಿ ಕಾರ್ಮಿಕರಿದ್ದರು. ಎಲ್ಲರೂ ಈಜಿ ಹೊರಬಂದಿದ್ದಾರೆ. ಯಾರಾದರೂ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿರಬಹುದಾದ ಸಾಧ್ಯತೆ ಇರುವುದರಿಂದ ಹುಡುಕಾಟ ಅಗ್ನಿಶಾಮಕ, ಮುಳುಗು ತಜ್ಞರನ್ನು ಸ್ಥಳಕ್ಕೆ ಕರೆಸಿ ನಡೆಸಿದ್ದೆವು. ಎಲ್ಲರೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ” ಎಂದು ತಿಳಿಸಿದರು.
“ಕಾರ್ಮಿಕರನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕರೆದುಕೊಂಡು ಹೋಗಿದ್ದಲ್ಲದೇ, ನೀರಿನ ಅಪಾಯವಿದ್ದರೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಫ್ಯಾಕ್ಟರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ತೋರಣಗಲ್ಲು ಎಸ್ಐ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.