ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಸೇರಿದಂತೆ ಹಲವರ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಗಿರೀಶ್ ಮಟ್ಟಣ್ಣನವರ್, “ಚಪಾತಿ ರೊಟ್ಟಿ ಕಾಯಿಸಿದಂತೆ ಸೌಜನ್ಯ ಹೋರಾಟಗಾರರ ಮೇಲೆ ಪೊಲೀಸರು ನಿರಂತರ ಎಫ್‌ಐಆರ್ ಮಾಡ್ತಿದ್ದಾರೆ. ಹೋರಾಟಗಾರರನ್ನು ಬೆದರಿಸಲು ಈ ತಂತ್ರ ಮಾಡಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, “ಕೋರ್ಟ್ ಹಾಗೂ ಪೊಲೀಸ್ ಸ್ಟೇಷನ್ ಅಂದ್ರೆ ನನಗೆ ಬೀಗರ ಮನೆ ಆಗಿದೆ. ಮಾನವ ಹಕ್ಕುಗಳ ಆಯೋಗದ ಜೊತೆಗೆ ಬಂದಿದ್ದೇವೆ. ನಿನ್ನೆ ನೂರು ಜನ ಪೊಲೀಸರು ಬಂಧನಕ್ಕೆ ಬಂದಿದ್ರು. ಈ ವೇಳೆ ನಾವು ಯಾರೂ ಕೆಲಸಕ್ಕೆ ಅಡ್ಡಿಪಡಿಸಿಲ್ಲ. ಮಹೇಶ್ ತಿಮರೋಡಿ, ಜಯಂತ್ ಮತ್ತು ನನ್ನ ವಿರುದ್ಧ ಸೇರಿ 30 ಜನರ ಮೇಲೆ ಕೇಸ್ ಹಾಕಿದ್ದಾರೆ. ಸುಮ್ಮನೆ ಸರ್ಕಾರದ ಇಂಧನ ವೇಸ್ಟ್ ಆಗೋದು ಬೇಡ. ಹೀಗಾಗಿ ಬಂಧನ ಮಾಡೋದಾದ್ರೆ ಮಾಡಲಿ ಅಂತ ಬಂದಿದ್ದೇನೆ. ಎಸ್ ಐ ಟಿಗೆ ಭೀಮಾ ಸುಳ್ಳು ಹೇಳಿದ್ದಕ್ಕೆ ಬಂಧನ ಅಂತ ಸುಳ್ಳು ಹೇಳ್ತಾ ಇದ್ದಾರೆ” ಎಂದು ತಿಳಿಸಿದರು.
“ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ಭಯ ಪಡಿಸುವ ಕೆಲಸ ನಿರಂತರವಾಗಿ ಆಗ್ತಾ ಇದೆ. ನಾವು ಯಾವುದೇ ಕಾರಣಕ್ಕೂ ಭಯ ಪಡೋದಿಲ್ಲ. ನಮ್ಮ ಮೇಲೆ ಕೇಸ್ ಮೇಲೆ ಕೇಸ್ ಹಾಕ್ತಾ ಇದ್ದಾರೆ. ಇದುವರೆಗೂ ನನ್ನ ಮೇಲೆ ನಾಲ್ಕೈದು ಕೇಸ್ ಹಾಕಿದ್ದಾರೆ. ಮಹೇಶ್ ಶೆಟ್ಟಿ ಮೇಲೆ 10ಕ್ಕೂ ಹೆಚ್ಚು ಕೇಸ್ ಹಾಕಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕೇಸ್ ಹಾಕ್ತಾನೆ ಇದ್ದಾರೆ. ಎಲ್ಲವನ್ನು ಎದುರಿಸೋಕೆ ನಾನು ಸಿದ್ದರಿದ್ದೇವೆ” ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ
“ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅರುಣ್ ಕುಮಾರ್ ಅವರಿಗೆ ಫೋನ್ ಮಾಡಿದ್ದೆ. ಎಫ್‌ಐಆರ್ ಆಗಿದೆ ಎಂದು ತಿಳಿಸಿದ್ದಾರೆ. ಎಫ್‌ಐಆರ್ ಪ್ರತಿ ಕೊಡುವಂತೆ ತಿಳಿಸಿದಾಗ, ಸರ್ವರ್ ಸಮಸ್ಯೆಯಿಂದಾಗಿ ಪ್ರತಿ ಅಪ್‌ಲೋಡ್ ಆಗಿಲ್ಲ ಅಂದಿದ್ದಾರೆ. ಎಫ್‌ಐಆರ್ ಕೊಟ್ಟರೆ ಮುಂದಿನ ಪ್ರೊಸೀಜರ್ ಅನ್ನು ನಾವು ಮಾಡುತ್ತೇವೆ ಅಂತ ತಿಳಿಸಿದ್ದೇನೆ. ಸೌಜನ್ಯಪರ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್ ದಾಖಲಾಗುತ್ತಿದೆ. ಕಾನೂನಿಗೆ ವಿರುದ್ಧವಾಗಿ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿದೆ. ಬಿಎನ್‌ಎಸ್ ಕಾಯ್ದೆಯಲ್ಲಿ, ಎಫ್‌ಐಆರ್ ದಾಖಲಾಗುವುದಕ್ಕೂ ಮುನ್ನ ವ್ಯಕ್ತಿಗೂ ಕಲಂ 35(3)ರ ಅಡಿ ನೋಟಿಸ್ ಕೊಡುವ ಅವಕಾಶವಿದೆ. ಆದರೆ, ಅದೆಲ್ಲವನ್ನೂ ಪೊಲೀಸ್ ಇಲಾಖೆ ಕಡೆಗಣಿಸಿದೆ. ನಿನ್ನೆ ಮಹೇಶ್ ಶೆಟ್ಟಿಯವರನ್ನೂ ಕೂಡ ಇದೇ ರೀತಿ ಬಂಧಿಸಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ತೀರ್ಪನ್ನು ಕೂಡ ಉಲ್ಲಂಘಿಸಿದ್ದಾರೆ” ಎಂದು ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.
