ರಸ್ತೆಗೆ ಉರುಳಿ ಬಿದ್ದಿದ್ದ ಮರವನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದರಿಂದ ಕೊನೆಗೆ ಗ್ರಾಮಸ್ಥರೇ ಖುದ್ದಾಗಿ ಮರ ಕಡಿಯುವ ಯಂತ್ರದ ನೆರವಿನಿಂದ ತೆರವುಗೊಳಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರಿನ ಬಿಕ್ಕೋಡು ಹೋಬಳಿ, ಬಿಕ್ಕೋಡು, ಕೆಸಗೋಡು ಆಲೂರು ಮುಖ್ಯ ರಸ್ತೆಯ ಹೊಳಲು ಗಡಿಯ ಗ್ರೀನ್ ಹುಡ್ ಎಸ್ಟೇಟ್ ಬಳಿ ಬೃಹತ್ ಕಾಡು ಜಾತಿಯ ಮರವು ಪೂರ್ತಿ ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸವಾರರಿಗೆ ತೀವ್ರತರದ ತೊಂದರೆ ಉಂಟಾಗಿತ್ತು. ಮರ ಬಿದ್ದಿದ್ದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ಹಾಸನದಿಂದ ಬೆಳಗ್ಗೆ ಆಲೂರು ಕೆಸಗೋಡು ಬಿಕ್ಕೋಡು ಮಾರ್ಗವಾಗಿ ಬರುವ ಸಾರಿಗೆ ಸಂಸ್ಥೆ ಬಸ್ ಕೆಸಗೋಡಿನಿಂದ ವಾಪಸ್ ಹೋಗಿದ್ದು ಬಿಕ್ಕೋಡು ಮತ್ತು ಸುತ್ತಮುತ್ತಲ ಪ್ರಯಾಣಿಕರಿಗೆ ತೀವ್ರ ಥರದ ತೊಂದರೆಯಾಗಿತ್ತು.
ರಸ್ತೆಗೆ ಬಿದ್ದಿದ್ದ ಮರ ತೆರವುಗೊಳಿಸಲು ಅಧಿಕಾರಿಗಳ ನಿರ್ಲಕ್ಷ್ಯ
ಬೇಲೂರು ಬಳಿಯ ಬಿಕ್ಕೋಡು-ಕೆಸಗೋಡು ಆಲೂರು ರಸ್ತೆಯ ಹೊಳಲು ಗಡಿಯ ಗ್ರೀನ್ ಹುಡ್ ಎಸ್ಟೇಟ್ ಬಳಿ ಬೃಹತ್ ಮರವು ಗುರುವಾರ ಸಂಜೆ ಬಿದ್ದಿತ್ತು. 20 ಗಂಟೆ ಕಳೆದರೂ ಸಂಬಂಧಪಟ್ಟವರು ಗಮನ ಹರಿಸದಿರುವುದನ್ನು ಕಂಡ ಸ್ಥಳೀಯ ಕೆಸಗೋಡಿನ ಲೋಕೇಶ್ ಮತ್ತು ತಂಡದವರು ಮರ ತೆರವುಗೊಳಿಸಿದರು. pic.twitter.com/3fP73mU1iq
— eedina.com ಈ ದಿನ.ಕಾಮ್ (@eedinanews) July 19, 2024
ಸುಮಾರು 20 ಗಂಟೆ ಕಳೆದರೂ ಸಂಬಂಧಪಟ್ಟ ಪಿಡಬ್ಲ್ಯೂಡಿ ಇಲಾಖೆ, ಅರಣ್ಯ ಇಲಾಖೆಯಾಗಲೀ, ಸ್ಥಳೀಯ ಪಂಚಾಯತ್ ಆಗಲಿ ಇತ್ತ ಕಡೆ ಗಮನ ಹರಿಸದಿರುವುದನ್ನು ಕಂಡ ಸ್ಥಳೀಯ ಕೆಸಗೋಡಿನ ಲೋಕೇಶ್ ಮತ್ತು ತಂಡದವರು ಸೇರಿ, ಮರ ತುಂಡರಿಸುವ ಯಂತ್ರದ ನೆರವಿನಿಂದ ಮರವನ್ನು ಕೊಯ್ದು ರಸ್ತೆಯ ಇಕ್ಕೆಲಗಳಿಗೆ ಸರಿಸಿ ವಾಹನಗಳು ಓಡಾಡಲು ಅನುವು ಮಾಡಿಕೊಟ್ಟರು.
ಮರ ತೆರವು ಕಾರ್ಯಾಚರಣೆಯಲ್ಲಿ ಕೆಸಗೋಡು ಶಾಲಾ ಶಿಕ್ಷಕ ಸಂಪತ್, ಗೋವಿಂದ, ಪಾಪ, ಕಿಟ್ಟಿ, ಹೊಳಲು ಯೋಗೇಂದ್ರ ಗೌಡ, ಪಂಚಾಯ್ತಿ ನೂತನ ಇನ್ನೂ ಮುಂತಾದವರು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿ, ಧನ್ಯವಾದ ಸಲ್ಲಿಸಿದರು.