ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ವಲಯದ ಹೂಡಿ ಗ್ರಾಮದ ಸರ್ವೆ ನಂ 79 ರಲ್ಲಿರುವ ಹೂಡಿ ಕೆರೆಯು ಒಟ್ಟು 15 ಎಕರೆ 10 ಗುಂಟೆ ಪ್ರದೇಶವಿದ್ದು, ಈ ಪೈಕಿ 14.5 ಗುಂಟೆ ಖಾಸಗಿ ಒತ್ತುವರಿಯಾಗಿತ್ತು. ಈ ಕೆರೆಯ ಒತ್ತುವರಿಗಳನ್ನು ಕಂದಾಯ ಇಲಾಖೆ ವತಿಯಿಂದ ಗುರುತಿಸಿ ಸರ್ವೆ ನಕ್ಷೆಯನ್ನು ನೀಡಿತ್ತು. ಸದರಿ ಒತ್ತುವರಿದಾರರಿಗೆ ನೋಟಿಸ್ ನೀಡಿದ ಬಿಬಿಎಂಪಿ, ಒತ್ತುವರಿ ತೆರವು ಆದೇಶದ ಬಳಿಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.
ಮಹದೇವಪುರ ವಲಯ ಆಯುಕ್ತರಾದ ಕೆ.ಎನ್ ರಮೇಶ್ ರವರ ನಿರ್ದೇಶನದಂತೆ ಇಂದು ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಂದಾಯ ಇಲಾಖೆಯ ಸರ್ವೆಯರ್ ರವರ ಸಮಕ್ಷಮದಲ್ಲಿ ಸುಮಾರು 1.75 ಗುಂಟೆ ಪ್ರದೇಶವನ್ನು ತೆರವುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಕರ್ನಾಟಕ ಸರ್ಕಾರದ ‘ಶಕ್ತಿ ಯೋಜನೆ’
ಒತ್ತುವರಿ ಸ್ಥಳದಲ್ಲಿ ಶೆಡ್, ಖಾಲಿ ಪ್ರದೇಶ ಮತ್ತು ಕಾಂಪೌಂಡ್ ಗೋಡೆ ಇದ್ದು, ಆ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಉಳಿದ ಒತ್ತುವರಿದಾರರಿಗೆ ನೋಟಿಸ್ ಹಾಗೂ ಒತ್ತುವರಿ ತೆರವು ಆದೇಶ ಜಾರಿಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
