18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವಕ್ಕೆ ಬುಧವಾರ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ 11 ಮಂದಿ ದುರಂತ ಸಾವು ಕಂಡಿದ್ದಾರೆ.
ಘಟನೆ ನಡೆದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, “ಇದೊಂದು ಅನಿರೀಕ್ಷಿತ ದುರ್ಘಟನೆ. ಇಷ್ಟೊಂದು ಜನ ಸೇರಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

“ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದರು. ‘ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶ ನೀಡಲಾಗಿದೆ. 15 ದಿನಗಳ ಒಳಗೆ ತನಿಖಾ ವರದಿ ಸಲ್ಲಿಸಲು ತಿಳಿಸಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.
ಮುಖ್ಯಮಂತ್ರಿ ಅವರು ಹೇಳಿಕೆ ನೀಡಿದ ಬೆನ್ನಹಿಂದೆಯೇ ಮ್ಯಾಜಿಸ್ಟ್ರೀಯಲ್ ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ನೇಮಿಸಿ ಆದೇಶ ಹೊರಬಿತ್ತು.

ಆ ಬಳಿಕ ಮೃತಪಟ್ಟವರ ವಿವರಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಐವರು ಪುರುಷರು, ಐವರು ಮಹಿಳೆಯರಿದ್ದಾರೆ. ಒಬ್ಬರ ವಿವರ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಮೃತಪಟ್ಟವರನ್ನು ಭೂಮಿಕ್ (20), ಸಹನಾ (19), ಪೂರ್ಣಚಂದ್ರ (32), ಚಿನ್ಮಯಿ (19), ದಿವ್ಯಾಂಶಿ (13) l ಶ್ರವಣ್ (20), ದೇವಿ (19) l ಶಿವಲಿಂಗ್ (17), ಮನೋಜ್ (33),ಅಕ್ಷತಾ ಹಾಗೂ 20 ವರ್ಷದ ಮತ್ತೊಬ್ಬರು ಮೃತಪಟ್ಟಿದ್ದು, ಹೆಸರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಗಾಯಾಳುಗಳ ವಿವರಗಳನ್ನು ಕೂಡ ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಆರ್‌ಸಿಬಿ-ಕೆಎಸ್‌ಸಿಎ ಬುಧವಾರ ರಾತ್ರಿ ಪ್ರಕಟಿಸಿದೆ.
ದುರ್ಘಟನೆಗೆ ಕಳವಳ, ಸಂತಾಪ ವ್ಯಕ್ತಪಡಿಸಿರುವ ಕೆಎಸ್‌ಸಿಎ ಮುಖ್ಯ ಹಣಕಾಸು ಅಧಿಕಾರಿ ಶಿವಾಜಿ ಲೋಖರೆ, ಈ ದುರ್ಘಟನೆ ನಡೆಯಬಾರದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಕಾಲ್ತುಳಿತದಲ್ಲಿ 11 ಜನರು ಬಲಿಯಾಗಿರುವುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಂತಾಪ ಸೂಚಿಸಿದೆ.
ಬುಧವಾರ ರಾತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, “ತಂಡ ಬೆಂಗಳೂರಿಗೆ ಬಂದ ನಂತರ ನಡೆದ ಕಾರ್ಯಕ್ರಮಗಳ ವೇಳೆ ಸಂಭವಿಸಿದ ದುರ್ಘಟನೆಗಳ ಕುರಿತು ಮಾಧ್ಯಮಗಳಿಂದ ತಿಳಿಯಿತು. ಸಂಭವಿಸಿದ ಜೀವಹಾನಿಗೆ ಆರ್‌ಸಿಬಿ ತೀವ್ರ ಶೋಕ ವ್ಯಕ್ತಪಡಿಸುತ್ತದೆ. ಮೃತ ವ್ಯಕ್ತಿಗಳ ಕುಟುಂಬಗಳ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತದೆ. ಪರಿಸ್ಥಿತಿ ತಿಳಿದ ತಕ್ಷಣ ತ್ವರಿತವಾಗಿ ಕಾರ್ಯಕ್ರಮ ಬದಲಿಸಲಾಯಿತು. ಸ್ಥಳೀಯ ಆಡಳಿತದ ಮಾರ್ಗಸೂಚಿ, ಸಲಹೆ ಅನುಸರಿಸಿದ್ದೇವೆ” ಎಂದು ತಿಳಿಸಿದೆ.
ಅಲ್ಲದೇ, ಕಾಲ್ತುಳಿತ ಘಟನೆಯ ಬಗ್ಗೆ ಆರ್‌ಸಿಬಿ ನೀಡಿದ ಹೇಳಿಕೆಯನ್ನು ತನ್ನ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, “ಈ ದುರ್ಘಟನೆ ಬಗ್ಗೆ ಮಾತನಾಡಲು ಪದಗಳೇ ಇಲ್ಲ. ನಿಜಕ್ಕೂ ಇದನ್ನು ಜೀರ್ಣಿಸಲು ಸಾಧ್ಯವಾಗುತ್ತಿಲ್ಲ” ಎಂದು ಬರೆದಿದ್ದು, ಒಡೆದ ಹೃದಯದ ಇಮೋಜಿಯನ್ನು ಹಾಕಿ ಸಂತಾಪ ಸೂಚಿಸಿದ್ದಾರೆ.
