ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ ಭಾಗದ ಪುನರ್ ಸ್ಥಾಪನೆ ಕೆಲಸವನ್ನು ತ್ವರಿತವಾಗಿ ಮುಗಿಸಲು ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ರಸ್ತೆ ಗುಂಡಿಗಳು, ರಸ್ತೆಗಳನ್ನು ಅಗೆದಿರುವ ಭಾಗದ ದುರಸ್ತಿ ಕಾರ್ಯದ ವಿಚಾರವಾಗಿ ಮಲ್ಲೇಶ್ವರಂ ಐಪಿಪಿ ಕೇಂದ್ರದಲ್ಲಿ ಇಂದು ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ ಜಲಮಂಡಳಿ ವತಿಯಿಂದ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿ ನಡೆಸಿರುವ ಕಡೆ, ರಸ್ತೆ ಕತ್ತರಿಸಿದ ಭಾಗದ ಪುನರ್ ಸ್ಥಾಪನೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರಿನ ಲೀಕೇಜ್, ಒಳಚರಂಡಿ ಪೈನ್ ಲೈನ್ ಮೇಲ್ಬಾಗ ಕುಸಿದು ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವ ರಸ್ತೆಗಳಲ್ಲಿ, ದುರಸ್ತಿ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1,344 ಕಿ.ಮೀ ಇದ್ದು, ಈ ಎಲ್ಲ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಬಳಸಿಕೊಂಡು ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಡೆ ರಸ್ತೆ ಗುಂಡಿಗಳು ಇದ್ದಲ್ಲಿ ಅದನ್ನು ಪರಿಶೀಲಿಸಿ ಕೂಡಲೆ ಮುಚ್ಚುವ ಕೆಲಸ ಮಾಡಬೇಕು. ಬೊಮ್ಮಸಂದ್ರ-ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಮೆಟ್ರೋ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ರಸ್ತೆ ದುರಸ್ತಿ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಸ್ಕಾಂ, ಕೆಪಿಟಿಸಿಎಲ್, ಬಿಡಿಎ, ಗೇಲ್, ರಾಷ್ಟ್ರೀಯ ಹೆದ್ದಾರಿ ನಿಗಮ ಸೇರಿದಂತೆ ಇನ್ನಿತರೆ ಇಲಾಖೆಗಳ ವತಿಯಿಂದ ಎಲ್ಲೆಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಅದರ ಪಟ್ಟಿ ಪಡೆದುಕೊಂಡು ಕಾಲಮಿತಿಯೊಳಗಾಗಿ ರಸ್ತೆಗುಂಡಿಗಳನ್ನು ಮುಚ್ಚಲು ತಿಳಿಸಿದ ಕಮಿಷನರ್, ನಗರದಲ್ಲಿ ಸಂಚಾರ ವಿಭಾಗದಿಂದ ಹೊಸದಾಗಿ ಟ್ರಾಫಿಕ್ ಸಿಗ್ನಲ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಕೇಬಲ್ ಅಳವಡಿಸಲು ರಸ್ತೆಯ ಆ ಬದಿಯಿಂದ ಈ ಬದಿಗೆ ರಸ್ತೆ ಕತ್ತರಿಸಿರುತ್ತಾರೆ. ಆದರೆ ಸರಿಯಾಗಿ ದುರಸ್ತಿ ಕಾರ್ಯ ಮಾಡಿಲ್ಲ. ಈ ಸಂಬಂಧ ಎಲ್ಲೆಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಅಂತಹ ಕಡೆ ಸರಿಪಡಿಸಲು ಸೂಚಿಸಲಾಯಿತು.
ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ದೋಷಮುಕ್ತ ರಸ್ತೆ (ಡಿ.ಎಲ್.ಪಿ) ಗಳಲ್ಲಿ ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಇನ್ನು ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ವೆಟ್ ಮಿಕ್ಸ್ ಹಾಕಿದ ಬಳಿಕ, ಅವಶ್ಯಕ ಬಿಟಮಿನ್ ಪಡೆದು ಗುಣಮಟ್ಟ ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನು ಓದಿದ್ದೀರಾ? ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಕರ್ನಾಟಕ ಸರ್ಕಾರದ ‘ಶಕ್ತಿ ಯೋಜನೆ’
ಈ ವೇಳೆ ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ, ವಲಯ ಮುಖ್ಯ ಅಭಿಯಂತರರು, ಸಂಚಾರ ಪೊಲೀಸ್ ವಿಭಾಗ ಬೆಸ್ಕಾಂ, ಜಲಮಂಡಳಿ, ಮೆಟ್ರೋ, ಲೋಕೋಪಯೋಗಿ ಇಲಾಖೆ, ಎನ್.ಹೆಚ್.ಎ.ಐ, ಗೇಲ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
