ಸಿಹಿ ತಿನಿಸು ಅಂಗಡಿಯೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ, ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಆಘಾತಕಾರಿ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಈ ಕುರಿತು ಸಂತ್ರಸ್ತ ಮಹಿಳೆಯೊಬ್ಬರು ಇನ್ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 25 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆಯು ಅಂಗಡಿಯ ಮೊದಲ ಮಹಡಿಯ ಶೌಚಾಲಯಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
“ಶೌಚಾಲಯದ ಒಳ ಪ್ರವೇಶಿಸಿದಾಗ, ಮುಂಭಾಗದ ಗೋಡೆ ಗಟ್ಟಿಯಾಗಿಲ್ಲದಿರುವುದು ಗಮನಕ್ಕೆ ಬಂತು. ಗೋಡೆಯ ಮೇಲ್ಭಾಗದಲ್ಲಿ ಫೈಬರ್ ಗ್ಲಾಸ್ ಫಲಕ ಮತ್ತು ಮುಖದ ಎತ್ತರಕ್ಕೆ ಮರದ ಹಲಗೆಗಳು ಇರುವುದನ್ನು ಗಮನಿಸಿದೆ. ಇದರಿಂದ ಅನುಮಾನಗೊಂಡು ಗೋಡೆಯಲ್ಲಿದ್ದ ಹಲಗೆಗಳನ್ನು ಪರಿಶೀಲಿಸಿದಾಗ ಇನ್ನೊಂದು ಬದಿಯಲ್ಲಿ ಫೋನ್ ಅಲ್ಲಾಡುತ್ತಿರುವುದು ಕಾಣಿಸಿತು. ಇದರಿಂದ, ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ದೃಢಪಡಿಸಿಕೊಂಡೆ” ಎಂಬುದಾಗಿ ಮಹಿಳೆ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಸಂತ್ರಸ್ತೆ ತನ್ನ ಸ್ನೇಹಿತೆಗೆ ವಿಚಾರ ತಿಳಿಸಿದ್ದು, ಅಂಗಡಿ ಸಿಬ್ಬಂದಿ ಬಳಿ ಪ್ರಶ್ನಿಸಿದ್ದಾರೆ. ʼಆಡಳಿತ ಮಂಡಳಿಯು ಆರಂಭದಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಲು ಹಿಂಜರಿಯಿತಾದರೂ ನಂತರ ಪರಿಶೀಲಿಸಲು ಸಮ್ಮತಿಸಿತು. ಭದ್ರತಾ ಸಿಬ್ಬಂದಿಯೊಬ್ಬ ನಿರ್ಬಂಧಿತ ಪ್ರದೇಶ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಹಿಂಬಾಗಿಲಿನಿಂದ ಮತ್ತೊಬ್ಬ ಉದ್ಯೋಗಿ ಹೊರಬರುತ್ತಿರುವುದು ಕಾಣಿಸಿತುʼ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಮಹಿಳೆಯ ಪ್ರಕಾರ, ರಾತ್ರಿ 9.10ರ ಸುಮಾರಿಗೆ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದರು. ಆರೋಪಿಯು ಆರಂಭದಲ್ಲಿ ಕೃತ್ಯ ಎಸಗಿದ್ದನ್ನು ಒಪ್ಪಿರಲಿಲ್ಲ. ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ವೀಡಿಯೊಗಳನ್ನು ಡಿಲೀಟ್ ಮಾಡುವುದಾಗಿ ತಿಳಿಸಿದ್ದಾನೆ ಮತ್ತು ಕ್ಷಮೆ ಯಾಚಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು | ಅನಿಲ ಸೋರಿಕೆಯಿಂದ ಹೊತ್ತಿ ಉರಿದ ಮನೆ: ಇಬ್ಬರು ಸಜೀವ ದಹನ
ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಕೋರಮಂಗಲ ಠಾಣಾ ಪೊಲೀಸರು ಉತ್ತರ ಭಾರತ ಮೂಲದ ಅಮೋಧ್ ಎಂಬಾತನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ವಿಡಿಯೋ ರಿಟ್ರೀವ್ಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.