ಬೆಂಗಳೂರು ನಗರದ ಮನೆಯೊಂದಕ್ಕೆ ನುಗ್ಗಿ ನಗದು ಸಹಿತ ಚಿನ್ನಾಭರಣ ಕಳವುಗೈದಿದ್ದ ಗ್ಯಾಂಗ್‌ವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಬಾಗಲಗುಂಟೆ ಠಾಣೆಯ ಪೊಲೀಸರು, ಓರ್ವ ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯು ಮನೆಗಳ್ಳನತದ ಪ್ರಮುಖ ಸೂತ್ರಧಾರಿ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ಬಂಧಿತರು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಗಿರವಿ ಇಟ್ಟಿದ್ದ ₹9.90 ಲಕ್ಷ ಮೌಲ್ಯದ 99 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕವಿತಾ(33), ವೆಂಕಟೇಶ್(43), ಕೃಷ್ಣ ಅಲಿಯಾಸ್ ಮೋರಿ ರಾಜ(52), ಹರೀಶ್(34), ನಾಗರಾಜ(29) ಹಾಗೂ ಪ್ರತಾಪ್(22) ಎಂದು ಗುರುತಿಸಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ದಾಸರಹಳ್ಳಿಯ ಮಲ್ಲಸಂದ್ರ ಪೈಪ್‌ಲೈನ್ ರಸ್ತೆಯಲ್ಲಿ ವಾಸವಿದ್ದ ಮಂಗಳ ಎಂಬುವವರ ಮನೆಗೆ ಕಳೆದ ಜುಲೈ 12ರಂದು ಕಳ್ಳರು ನುಗ್ಗಿದ್ದರು. ಮನೆಯ ಮುಂಬಾಗಿಲ ಬೀಗವನ್ನು ಒಡೆದಿದ್ದ ದುಷ್ಕರ್ಮಿಗಳು, ಲಾಕರ್‌ನಲ್ಲಿಟ್ಟಿದ್ದ 19 ಗ್ರಾಂ ಚಿನ್ನಾಭರಣ ಮತ್ತು 1,56,000/- ನಗದು ಹಾಗೂ ಕೆಲವೊಂದು ದಾಖಲಾತಿಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ಮನೆಯೊಡತಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಕವಿತಾ ಅವರು ಮನೆಯೊಡತಿ ಮಂಗಳ ಅವರಲ್ಲಿ ಕೈಸಾಲ ಮಾಡಿದ್ದರು. ಕೈ ಸಾಲದ ವೇಳೆ ಕರಾರುಪತ್ರವೊಂದನ್ನು ಕೂಡ ಮಾಡಿಸಿಕೊಂಡಿದ್ದರು. ಇದನ್ನು ಆರೋಪಿ ಕವಿತಾ, ತನ್ನ ಅಣ್ಣ ವೆಂಕಟೇಶ್‌ಗೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಆರೋಪಿ ವೆಂಕಟೇಶ್, ತನ್ನ ನಾಲ್ವರು ಸಹಚರರೊಂದಿಗೆ ಜುಲೈ 12ರಂದು ದರೋಡೆ ಮಾಡಿ, ಪರಾರಿಯಾಗಿದ್ದ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಎ1 ಆರೋಪಿ ವೆಂಕಟೇಶ್‌ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಸಹೋದರಿಯೇ ಈ ಕೃತ್ಯವನ್ನು ಮಾಡಿಸಿದ್ದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕವಿತಾ ಅವರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೊಳಪಡಿಸಿದಾಗ, ಕಳವು ಮಾಡಲು ಪ್ರಚೋದಿಸಿದ್ದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ.
ಅಲ್ಲದೇ, ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ತಮಿಳುನಾಡಿನ ತಿರುಚಿ, ಆಂಧ್ರಪ್ರದೇಶದ ಪೇರುಪಳ್ಳಿಯ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸುಮಾರು ₹9.90 ಲಕ್ಷ ಮೌಲ್ಯದ 99 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ಬಾಗಲಗುಂಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಂಡೀಪುರ | ಗಾಯಗೊಂಡ ಸ್ಥಿತಿಯಲ್ಲಿ ಹುಲಿ ಪತ್ತೆ; ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ನಾಗೇಶ್.ಡಿ.ಎಲ್ ಅವರ ಮಾರ್ಗದರ್ಶನದಲ್ಲಿ, ಪೀಣ್ಯ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಶೋಕ್.ಎಂ.ಎಸ್. ಅವರ ನೇತೃತ್ವದಲ್ಲಿ, ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತರಾಜ್.ಎಂ., ಪಿಎಸ್‌ಐ ನವೀನ್ ಕುಮಾರ್, ಸಿಬ್ಬಂದಿಗಳಾದ ಸೋಮಶೇಖರ್, ಶಶಿಧರ್, ಶ್ರೀಮತಿ ಗಾಯತ್ರಿ ಹೆಚ್, ಬೀರಪ್ಪ, ಮಾರುತಿ ಮನೋಜ್, ಸಾದಿಕ್, ಚೇತನ್, ಮಧು, ಪುತ್ರೇಶ್ ಬೆಳ್ಳಂಕಿ, ಸಿಂಗರಾಯ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
