ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಗೆ ಮಾ.31 ಕಡೆ ದಿನವಾಗಿದ್ದು, ಪಾವತಿ ಮಾಡದೇ ಇದ್ದಲ್ಲಿ ಡಬಲ್ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಿದೆ ಎಂದು ಬಿಬಿಎಂಪಿ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ”ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಅಂದಾಜು ₹5,210 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿತ್ತು. ಆದರೆ, ಈವರೆಗೆ ₹4604 ಕೋಟಿ (ಶೇ 88.36) ವಸೂಲಾಗಿದೆ. ಆರ್ಥಿಕ ವರ್ಷಾಂತ್ಯಕ್ಕೆ 15 ದಿನಗಳಷ್ಟೇ ಬಾಕಿ ಉಳಿದಿದ್ದು, ಬಾಕಿ ಆಸ್ತಿ ತೆರಿಗೆ ವಸೂಲಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂದು ಸೂಚನೆ ನೀಡಿದರು.
ಏಪ್ರಿಲ್ 1ರ ಬಳಿಕ ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲಿಕರು ಪಾವತಿಸಬೇಕಾಗಿದೆ. ಜೊತೆಗೆ ವಾರ್ಷಿಕ 15% ಬಡ್ಡಿ ದರವೂ ಇರಲಿದೆ. ಈ ಹಿಂದೆ ಆಸ್ತಿ ತೆರಿಗೆಯ ದುಪ್ಪಟ್ಟು ಮೌಲ್ಯದ ದಂಡ ಪಾವತಿಸಬೇಕಿತ್ತು. ಆದರೆ ಸರ್ಕಾರ ಇದನ್ನು ಕಡಿತಗೊಳಿಸಿ ಆಸ್ತಿ ತೆರಿಗೆಯ ಸಮಾನ ಹಣವನ್ನು ದಂಡವಾಗಿ ಕಟ್ಟಲು ಸೂಚಿಸಿದೆ. ಅಂದರೆ ₹100 ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ ₹100 ದಂಡ ಬೀಳಲಿದೆ ಎಂದು ಬಿಬಿಎಂಪಿ ತಿಳಿಸಿದೆ.
ಇದನ್ನೂ ಓದಿ: ಚಿತ್ರದುರ್ಗ | ಕೃಷಿ ಬೆಲೆ ಆಯೋಗದ ಬೆಂಗಳೂರು ವಿಭಾಗದ ಸಬೆ, ಚಿತ್ರದುರ್ಗದಿಂದ ರೈತ ಪ್ರತಿನಿಧಿಗಳು.
ಪ್ರಸ್ತುತ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,82,467 ಆಸ್ತಿ ಮಾಲಿಕರು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಮಹದೇವಪುರ, ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಬಾಕಿ ಇದ್ದು, ಇವರಿಗೆ 100% ದಂಡದ ಜೊತೆ 15% ಬಡ್ಡಿ ಬೀಳಲಿದೆ.
