ಬೆಂಗಳೂರು ನಗರದಲ್ಲಿ ಟ್ಯಾಂಕರ್ ನೀರು ಪೂರೈಕೆ ದಂಧೆಯನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ‘ಸರ್ವರಿಗೂ ಸಂಚಾರಿ ಕಾವೇರಿ’, ‘ಮನೆ ಬಾಗಿಲಿಗೆ ಸರಳ ಕಾವೇರಿ’ ಯೋಜನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.
“ಸುಮಾರು 3 ಸಾವಿರ ಕೊಳವೆ ಬಾವಿ ಕೊರೆಸಿ, ಟ್ಯಾಂಕರ್‌ಗಳನ್ನು ಇಟ್ಟುಕೊಂಡು ₹3,000ದವರೆಗೂ ಹಣ ವಸೂಲಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇಂದು ಈ ಯೋಜನೆ ಮೂಲಕ 4 ಸಾವಿರ ಲೀಟರ್ ನೀರಿಗೆ ₹660 ಹಾಗೂ 6 ಸಾವಿರ ಲೀಟರ್ ನೀರಿಗೆ ₹740 ದರ ನಿಗದಿ ಮಾಡಲಾಗಿದೆ. ಇದು ಕೊಳವೆ ಬಾವಿ ನೀರಲ್ಲ. ಇದು ಬಿಡಬ್ಲ್ಯೂಎಸ್ಎಸ್‌ಬಿ ವತಿಯಿಂದ ನೀಡುತ್ತಿರುವ ಶುದ್ಧ ಕುಡಿಯುವ ನೀರು” ಎಂದು ತಿಳಿಸಿದರು.
ನೀರಿನ ಸಂಪರ್ಕ ಶುಲ್ಕ ₹1000 ನಿಗದಿಗೆ ತೀರ್ಮಾನ: “ನೀರಿನ ಮಾಫಿಯಾ ತಡೆಯಲು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಇದು ಸಣ್ಣ ಯೋಜನೆಯಲ್ಲ. ಕಳೆದ ವರ್ಷ ಬರಗಾಲದಲ್ಲಿ ನೀರಿನ ಅಭಾವ ಎದುರಾದಾಗ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಲಾಯಿತು. ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿ ಸಭೆ ಮಾಡಲಾಗಿದೆ. ಸಣ್ಣ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಕೇವಲ ₹1,000 ಶುಲ್ಕ ಪಡೆಯಲು ತೀರ್ಮಾನಿಸಿದ್ದೇವೆ. ಅಪಾರ್ಟ್ಮೆಂಟ್ನವರಿಗೆ ಆರಂಭದಲ್ಲಿ ಶೇ.20ರಷ್ಟು ಹಣ ಪಡೆದು ನಂತರ ಒಂದು ವರ್ಷ ಕಾಲಾವಕಾಶ ನೀಡಲು ಮುಂದಾಗಿದ್ದೇವೆ. ಹೀಗೆ ಹೊಸ ನೀತಿಗಳ ಮೂಲಕ ಎಲ್ಲವನ್ನು ಒಂದು ವ್ಯವಸ್ಥೆಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಇಂದು ಸರ್ವರಿಗೂ ಸರಳ ಕಾವೇರಿ, ಮನೆ ಬಾಗಿಲಿಗೆ ಸಂಚಾರಿ ಕಾವೇರಿ ಯೋಜನೆಗಳನ್ನು ಪ್ರಾರಂಭಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿದೆ. ನಿನ್ನೆ ನೆಲಮಂಗಲದಲ್ಲಿ ₹1,900 ಕೋಟಿ ವೆಚ್ಚದಲ್ಲಿ ವೃಷಭಾವತಿ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಪ್ರತಿ ನೀರಿನ ಹನಿಯೂ ಮಹತ್ವದ್ದಾಗಿದೆ. ಅನೇಕರು ಇದನ್ನು ಟೀಕೆ ಮಾಡಬಹುದು. ಆದರೆ ಇಂತಹ ಯೋಜನೆ ಇದೇ ಮೊದಲಲ್ಲ. ದೆಹಲಿಯಲ್ಲೂ ಯಮುನಾ ನದಿ ನೀರನ್ನು ಗಿಡ ಬೆಳೆಸಲು, ವಾಹನ ತೊಳೆಯಲು ಹಾಗೂ ಕೈಗಾರಿಕೆಗೆ ಪೂರೈಸುತ್ತಾರೆ” ಎಂದರು.
“ನಾನು ಹಾಗೂ ಶಾಸಕರು ಈ ನೀರನ್ನು ಕುಡಿಯುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕವನ್ನು ಮೊದಲು ಆರಂಭಿಸಿದ್ದು, ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಸುಮಾರು 300ಕ್ಕೂ ಹೆಚ್ಚು ಘಟಕ ಪ್ರಾರಂಭಿಸಿದ್ದೆ. ನಾನು ಬಹಳ ಇಚ್ಛಾಶಕ್ತಿಯಿಂದ ಬೆಂಗಳೂರು ನಗರದ ಜವಾಬ್ದಾರಿ ವಹಿಸಿದ್ದೇನೆ. ಇದು ಬಹಳ ಕಷ್ಟದ ಕೆಲಸ ಎಂದು ಗೊತ್ತಿದೆ. ಆದರೂ ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಮನಸ್ಸಿದ್ದಲ್ಲಿ ಮಾರ್ಗ, ಭಕ್ತಿ ಇದ್ದಲ್ಲಿ ದೇವರು ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ” ಎಂದು ಹೇಳಿದರು.
“ಬಿಡಬ್ಲ್ಯೂಎಸ್ಎಸ್ಬಿಯಿಂದ ಇತ್ತೀಚೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ. ಈಗ ಕರ್ನಾಟಕ ಸರ್ಕಾರ ಕೆಆರ್ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನೀರಾವರಿ ಇಲಾಖೆಯಿಂದ ಸುಮಾರು ₹100 ಕೋಟಿ ಮೀಸಲಿಡಲಾಗಿದೆ. ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಪಡಿಕೊಳ್ಳಲಾಗಿದೆ. ಇದಕ್ಕಾಗಿ ಸಮಿತಿ ಮಾಡಿ ರಾಮ್ ಪ್ರಸಾತ್ ಮನೋಹರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದಸರಾ ವೇಳೆಗೆ ಈ ಕಾವೇರಿ ಆರತಿ ಮಾಡಲು ಸಿದ್ಧತೆ ಮಾಡಲಾಗುತ್ತಿದೆ” ಎಂದರು.
“ಕೊಡಗಿನಿಂದ ಹಿಡಿದು ರಾಜ್ಯದ ಎಲ್ಲ ಭಾಗಗಳ ಸಂಸ್ಕೃತಿ ಸೇರಿಸಿ ವಾರದಲ್ಲಿ ಮೂರು ದಿನ ಪೂಜೆ ಸಲ್ಲಿಸಬೇಕು. ಬರುವ ಪ್ರವಾಸಿಗರು ಪೂಜೆ ಸಲ್ಲಿಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲಾಗುವುದು. ಕಾವೇರಿ ಹಾಗೂ ನೀರಿನ ಮಹತ್ವ ಎಲ್ಲರಿಗೂ ಅರಿವಾಗಲಿ ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಇಲಾಖೆಗಳಿಗೆ ಸೂಕ್ತ ಜವಾಬ್ದಾರಿ ನೀಡಲಾಗುವುದು” ಎಂದು ಹೇಳಿದರು.
“ನಾನು ಜವಾಬ್ದಾರಿ ತೆಗೆದುಕೊಂಡು ಬಿಡಬ್ಲ್ಯೂಎಸ್ಎಸ್‌ಬಿ ಸಭೆ ನಡೆಸಿದಾಗಲೇ ಇಲ್ಲಿನ ಆರ್ಥಿಕ ಪರಿಸ್ಥಿತಿ ಅರಿವಾಯಿತು. 2014ರ ಬಳಿಕ ನೀರಿನ ದರ ಏರಿಕೆ ಮಾಡುವ ಯಾರೂ ಧೈರ್ಯ ಮಾಡಿರಲಿಲ್ಲ. ನಾನು ಕೇವಲ ಸಿಎಂ ಅವರಿಗೆ ವಿಚಾರ ತಿಳಿಸಿ, ತೀರ್ಮಾನ ಮಾಡಿದೆ. ನಂತರ ಟೀಕೆ ಮಾಡುವವರು, ಧಿಕ್ಕಾರ ಕೂಗುವವರು ನನ್ನ ವಿರುದ್ಧ ಮಾಡಲಿ, ನೀವು ದರ ಏರಿಕೆ ಮಾಡಿ ಎಂದು ಮಂಡಳಿಗೆ ಸೂಚಿಸಿದೆ. ಎಲ್ಲ ವಸ್ತುಗಳ ದರ ಏರಿಕೆಯಾಗುತ್ತಿರುವಾಗ ನೀರಿನ ದರ ಮಾತ್ರ ಏರಿಕೆಯಾಗಿಲ್ಲ. ನಿಮ್ಮ ಮಂಡಳಿಯೂ ನಡೆಯಬೇಕೆಂದು ದರ ಏರಿಕೆ ಮಾಡಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಏಕೆ ಮುಖ್ಯ? ಅನುಸರಿಸಬೇಕಿರುವ ಬಗೆ ಹೇಗೆ?
“ಕಾವೇರಿ ನೀರಿನಲ್ಲಿ ಬಾಕಿ ಉಳಿದಿದ್ದ 6 ಟಿಎಂಸಿ ನೀರನ್ನು ಬಿಡಬ್ಲ್ಯೂಎಸ್ಎಸ್‌ಬಿ ಪೂರೈಕೆಗೆ ನಾನು ಆದೇಶ ಹೊರಡಿಸಿದೆ. ಮುಂದೆ ಕಾವೇರಿ ಆರನೇ ಹಂತ ಯೋಜನೆಗೆ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ದರ ಏರಿಕೆ ನಂತರ ಈಗ ವಿವಿಧ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತಿವೆ. ಇದರ ಜತೆಗೆ ಒಳಚರಂಡಿ ವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೀರಿ. ನಾನು ಕೃಷ್ಣಾ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ನನ್ನನ್ನು ವಿದೇಶಕ್ಕೆ ಅಧ್ಯಯನಕ್ಕಾಗಿ ಕಳುಹಿಸಿದ್ದರು. ಈ ಮಂಡಳಿಯಲ್ಲಿ ರಾಜಕೀಯದವರನ್ನು ಮುಖ್ಯಸ್ಥರನ್ನಾಗಿ ಮಾಡುವ ಅವಕಾಶವಿತ್ತು. ಅದಕ್ಕೆ ಅಂತ್ಯವಾಡಿ ರಾಜಕಾರಣಿಗಳಿಗೆ ಅದರಲ್ಲಿ ಅವಕಾಶ ನೀಡಬಾರದು, ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಇದನ್ನು ನಿಭಾಯಿಸಲು ತೀರ್ಮಾನಿಸಲಾಯಿತು” ಎಂದರು.
“ಬೆಂಗಳೂರಿನ ಭದ್ರತೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಸಂದೇಶವನ್ನು ರವಾನಿಸುತ್ತೇವೆ. ದೇಶದ ಐಕ್ಯತೆ ಗಮನದಲ್ಲಿಟ್ಟುಕೊಂಡು ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಗಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಚಾರ ಚರ್ಚೆ ಮಾಡಿ ನಂತರ ಮಾಹಿತಿ ನೀಡುತ್ತೇವೆ” ಎಂದರು.