ಬೆಂಗಳೂರು ನಗರದ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಣ ಮಾಡಿ ‘ಬೆಂಗಳೂರು ಮೆಟ್ರೋ_ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಬಂಧಿಸಲ್ಪಟ್ಟ ಯುವಕನನ್ನು ಹಾವೇರಿ ಮೂಲದ, ಬೆಂಗಳೂರಿನ ಪೀಣ್ಯದಲ್ಲಿ ವಾಸಿಸುತ್ತಿದ್ದ ದಿಗಂತ್ (27 ವರ್ಷ) ಎಂದು ಗುರುತಿಸಲಾಗಿದೆ.
“ಈತ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಪೀಣ್ಯದಲ್ಲಿ ಈತನನ್ನು ಶುಕ್ರವಾರ ಬಂಧಿಸಲಾಗಿದೆ” ಎಂದು ಬನಶಂಕರಿ ಪೊಲೀಸರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
“ಆರೋಪಿ ಯುವಕ ಅಪ್ಲೋಡ್ ಮಾಡುತ್ತಿದ್ದ ‘ಬೆಂಗಳೂರು ಮೆಟ್ರೋ_ಚಿಕ್ಸ್’ ಇನ್ಸ್ಟಾಗ್ರಾಮ್ ಮತ್ತು ಟೆಲಿಗ್ರಾಂ ಪೇಜ್‌ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾನೆ. ಎಲ್ಲ ಸೈಬರ್ ವಿವರಗಳನ್ನು ಪರಿಶೀಲನೆ ನಡೆಸಿದಾಗ ಪೀಣ್ಯದಲ್ಲಿ ವಾಸಿಸುತ್ತಿರುವುದು ಗೊತ್ತಾಗಿದೆ. ಸಂಪೂರ್ಣ ವಿವರ ತಿಳಿಯುತ್ತಿದ್ದಂತೆಯೇ ಪೀಣ್ಯದಲ್ಲಿ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈತ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ” ಎಂದು ಬನಶಂಕರಿ ಪೊಲೀಸ್ ಠಾಣೆಯ ಎಸ್‌ಐ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
“ಈತ ಅಪ್ಲೋಡ್ ಮಾಡುತ್ತಿದ್ದ ‘ಬೆಂಗಳೂರು ಮೆಟ್ರೋ_ಚಿಕ್ಸ್’ ಇನ್ಸ್ಟಾಗ್ರಾಮ್ ಖಾತೆಗೆ ಸುಮಾರು 6,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆ” ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ಮೆಟ್ರೋ ರೈಲುಗಳು ಹಾಗೂ ನಿಲ್ದಾಣಗಳಲ್ಲಿ ಮೊಬೈಲ್‌ಗಳಲ್ಲಿ ಮಹಿಳೆಯರ ವಿಡಿಯೋ ಸೆರೆ ಹಿಡಿದು ‘ಮೆಟ್ರೋ ಚಿಕ್ಸ್’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿತ್ತು. ಈ ಖಾತೆಯನ್ನು ಸುಮಾರು 6,000 ಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ನೆಟ್ಟಿಗರೋರ್ವರು ಬೆಂಗಳೂರಿನ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದರು.

ಸಾರ್ವಜನಿಕ ವಲಯದಲ್ಲಿ ಈ ಕಿಡಿಗೇಡಿ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬನಶಂಕರಿ ಠಾಣೆ ಪೊಲೀಸರು ‘ಮೆಟ್ರೋ ಚಿಕ್ಸ್’ ಇನ್ಸ್‌ಸ್ಟಾಗ್ರಾಮ್ ಖಾತೆದಾರನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಬಳಿಕ ಈ ವಿಡಿಯೋ ಪೋಸ್ಟ್ ಮಾಡಿದ್ದ ಕಿಡಿಗೇಡಿಯ ಪತ್ತೆಗೆ ತನಿಖೆ ಕೈಗೊಂಡಿದ್ದರು.
ಸ್ವಯಂ ಪ್ರೇರಿತ ದೂರಿನಲ್ಲಿ ಏನಿತ್ತು?
ಬನಶಂಕರಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವಶಂಕರ್ ಈ ಸಂಬಂಧ ದೂರು ನೀಡಿದ್ದಾರೆ. ಮೇ 5ರಂದು ಸಂಜೆ ಸಾಮಾಜಿಕ ಜಾಲತಾಣ ವೀಕ್ಷಿಸುವಾಗ ಇನ್ಸ್‌ಸ್ಟಾಗ್ರಾಮ್ ಆ್ಯಪ್‌ನ ಮೆಟ್ರೋ ಚಿಕ್ಸ್ ಎಂಬ ಖಾತೆಯಲ್ಲಿ ಮಹಿಳೆಯರ ವಿಡಿಯೋಗಳು ಕಂಡು ಬಂದವು. ಮೆಟ್ರೋ ರೈಲಿನಲ್ಲಿ ಸಂಚರಿಸುವ ಹಾಗೂ ನಿಲ್ದಾಣಗಳಲ್ಲಿ ನಡೆದು ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಆ ಮಹಿಳೆಯರ ದೇಹದ ಹಿಂಭಾಗ ಹಾಗೂ ಮುಂಭಾಗವನ್ನು ವಿಡಿಯೋ ಚಿತ್ರೀಕರಣ ಮಾಡಿ ಆ ವಿಡಿಯೋವನ್ನು ಮೆಟ್ರೋ ಚಿಕ್ಸ್ ಎಂಬ ಖಾತೆಯಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಈ ಖಾತೆಯಲ್ಲಿ ಒಟ್ಟು 14 ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕರ್ನಾಟಕ ವಕ್ಪ್ ಪರಿಷತ್ ಉಪಾಧ್ಯಕ್ಷರಾಗಿ ಮೌಲಾನಾ ಶಾಫಿ ಸಅದಿ ನೇಮಕ
ಈ ರೀತಿಯ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಮಹಿಳೆಯರ ಗೌರವಕ್ಕೆ ಧಕ್ಕೆ ತರಲಾಗಿದೆ. ಹೀಗಾಗಿ ಈ ಕಿಡಿಗೇಡಿ ಕೆಲಸ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ, ಕಿಡಿಗೇಡಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.