38 ವರ್ಷದ ಹಿಂದೆ ಕಳ್ಳತನ ಮಾಡಿದ್ದ ಆರೋಪಿಯನ್ನು ಕೊನೆಗೂ ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪಾಷಾ ಜಾನ್ ಎಂಬುವವರು ತಾವು 22 ವರ್ಷ ವಯಸ್ಸಿನಲ್ಲಿದ್ದಾಗ, ಅಂದರೆ 1985ರಲ್ಲಿ, ಸೈಕಲ್ ಕಳ್ಳತನ ಮಾಡಿದ್ದರು. ಈ ಕಳ್ಳತನ ನಡೆದ ಒಂದೇ ತಿಂಗಳಿಗೆ ಕೆಜಿಎಫ್ ಪೊಲೀಸರು ಬಂಧಿಸಿದ್ದರು.
ಪೊಲೀಸ್ ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ, ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಬಳಿಕ ಪಾಷಾ ಜಾನ್ ನಾಪತ್ತೆಯಾಗಿದ್ದರು. ಅವರ ಹೆಸರಿನಲ್ಲಿ ಸುಮಾರು 200 ವಾರಂಟ್ ಹೊರಡಿಸಲಾಗಿತ್ತು ಎಂದು ವಕೀಲರೊಬ್ಬರು ತಿಳಿಸಿದ್ದಾರೆ.
ಆರೋಪಿ ಪಾಷಾ ಜಾನ್ ಅವರು ಕೆಜಿಎಫ್ನಿಂದ ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆಸಿದ್ದರು. ನಗರದಲ್ಲಿ ಆಟೋ ರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದರು. ಇದೀಗ ಇವರಿಗೆ 60 ವರ್ಷ ತುಂಬಿದೆ.
ಪಾಷಾ ಅವರು ಕೆಜಿಎಫ್ನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಕಾರಣದಿಂದ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಗೋಲ್ ಗುಂಬಜ್ ಎಕ್ಸ್ಪ್ರೆಸ್ ರೈಲು ಸೇವೆ ಪಂಢರಪುರದವರೆಗೆ ವಿಸ್ತರಣೆ
ಆರೋಪಿ ಪತ್ತೆಗಾಗಿ ಮೂವರು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಯ ಸಂಬಂಧಿಕರೊಬ್ಬರು ಆರೋಪಿ ಕೆ.ಆರ್.ಪುರಂನಲ್ಲಿ ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆರೋಪಿ ಮನೆಗೆ ತೆರಳಿ ಪೊಲೀಸರು ಆತನನ್ನು ಹಿಡಿದಿದ್ದಾರೆ.
ಈ ವೇಳೆ ಆರೋಪಿಯು, ‘ನಾನು ಕಳ್ಳತನ ಮಾಡಿಲ್ಲ, ತಪ್ಪಾಗಿ ತಿಳಿದುಕೊಳ್ಳಲಾಗಿದೆ’ ಎಂದು ಪೊಲೀಸರಿಗೆ ಹೇಳಿದಾಗ, ಪೊಲೀಸ್ ತಂಡ ಜಾನ್ ಅವರ ಬೆರಳಚ್ಚು ಸಂಗ್ರಹಿಸಿ ಆತನೇ ಆರೋಪಿ ಎಂದು ಖಚಿತಪಡಿಸಿಕೊಂಡು ನಂತರ ಆತನನ್ನು ಬಂಧಿಸಿದ್ದಾರೆ.