- ಬಾಲಕರ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲು
- ಜಗಳ ಮಾಡುವ ವೇಳೆ ನಾಲ್ವರಿಗೆ ಬೈದು ಬುದ್ಧಿವಾದ ಹೇಳಿದ್ದ ದೈಹಿಕ ಶಿಕ್ಷಕಿ
ರಾಜಧಾನಿ ಬೆಂಗಳೂರಿನ ಶ್ರೀರಾಂಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಗರದ ಮಾಗಡಿ ರೋಡ್ ನಿವಾಸಿ ಆದರ್ಶ್ (15) (ಹೆಸರು ಬದಲಾಯಿಸಲಾಗಿದೆ) ಹಲ್ಲೆಗೊಳಗಾದ ವಿದ್ಯಾರ್ಥಿ. ಈತನ ಸಹಪಾಠಿ ರೋಹನ್ (ಹೆಸರು ಬದಲಾಯಿಸಲಾಗಿದೆ) ಸೇರಿದಂತೆ ಇನ್ನಿತರರು ಹಲ್ಲೆ ಮಾಡಿದವರು.
ಜುಲೈ 27ರಂದು ಆದರ್ಶ್ ತನ್ನ ಸಹಪಾಠಿ ವಿದ್ಯಾರ್ಥಿನಿಯಿಂದ ನೋಟ್ಸ್ ಪಡೆಯುವ ವಿಚಾರವಾಗಿ ಆಕೆಯೊಂದಿಗೆ ಕೆಲ ನಿಮಿಷಗಳ ಕಾಲ ಮಾತನಾಡಿದ್ದಾನೆ. ಇದನ್ನು ತಪ್ಪಾಗಿ ಗ್ರಹಿಸಿದ ಸಹಪಾಠಿಗಳು ಆದರ್ಶ್‌ನೊಂದಿಗೆ ಗಲಾಟೆ ಆರಂಭಿಸಿದ್ದಾರೆ. ಈ ಗಲಾಟೆಯನ್ನು ಕಂಡ ದೈಹಿಕ ಶಿಕ್ಷಕಿ ಮಧ್ಯೆ ಪ್ರವೇಶಿಸಿ ಗಲಾಟೆ ಮಾಡಿದವರಿಗೆ ಬೈದು ಬುದ್ಧಿವಾದ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋರ್ಟ್ ಆದೇಶ; ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್ಐಆರ್ ದಾಖಲು
ಇಷ್ಟಕ್ಕೆ ಸುಮ್ಮನಾಗದ ಸಹಪಾಠಿಗಳು ಜುಲೈ 27ರಂದು ಮಧ್ಯಾಹ್ನ 3:45ರ ಸುಮಾರಿಗೆ ಆದರ್ಶ್ ಮನೆಗೆ ಹಿಂತಿರುಗುವ ವೇಳೆ ನಾಲ್ವರು ಯುವಕರು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅದೇ ದಿನ ಆದರ್ಶ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಮನೆಗೆ ಬಂದಿದ್ದಾನೆ. ಇದನ್ನು ಕಂಡ ಆದರ್ಶನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೋಹನ್ ಮತ್ತು ಇತರ ಮೂವರು ಸಹಪಾಠಿಗಳು ಸೇರಿ ಆದರ್ಶ್‌ನನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಇದರಿಂದ ಆದರ್ಶನ ಹಲ್ಲುಗಳು ಮುರಿದಿವೆ ಹಾಗೂ ಆದರ್ಶನ ಕಣ್ಣಿಗೆ ಪೆಟ್ಟಾಗಿದೆ. ವೈದ್ಯರ ಪ್ರಕಾರ ಆದರ್ಶನ ಕಣ್ಣಿಗೆ ಹಾನಿಯಾಗಿದೆ. ಆದರ್ಶ್ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.
“ನಾಲ್ವರು ಬಾಲಕರ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.