ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಸೆ.11 ರಂದು ಬಂದ್‌ಗೆ ಕರೆ ನೀಡಿತ್ತು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಟೋ, ಕ್ಯಾಬ್ ಬಸ್ ಚಾಲಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದರು. ಇತ್ತಕಡೆ ನಗರದೆಲ್ಲೆಡೆ ಕೆಲವು ಪ್ರತಿಭಟನಾನಿರತರು ರ್‍ಯಾಪಿಡೋ ಸವಾರರು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಕ್ಯಾಬ್ ಚಾಲಕರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆ ಮಾಡಿದ ಘಟನೆಗಳು ನಡೆದಿವೆ.
ಬೇಕೇಂದೆ ರ್‍ಯಾಪಿಡೋ ಬುಕ್ ಮಾಡಿ ಸವಾರರನ್ನು ತಾವಿರುವ ಕಡೆ ಕರೆಸಿ ಹೆಲ್ಮೆಟ್ ತೆಗೆದು ಹಲ್ಲೆ ಮಾಡುವುದು, ಇನ್ನೊಂದೆಡೆ ಬಾಡಿಗೆಗೆ ಹೋಗುತ್ತಿದ್ದ ಕಾರ್ ಮೇಲೆ ಕಲ್ಲು ಹಾಕಿ ಗಾಜು ಪುಡಿ ಪುಡಿ ಮಾಡುವುದು, ಆಟೋ ಚಾಲಕರ ಮೇಲೆ ಹಲ್ಲೆ, ಕಾರ್ ಕೀ ಕಿತ್ತುಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಪ್ರತಿಭಟನೆಗೆ ಸಹಕಾರ ನೀಡದ ಚಾಲಕರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸುವುದು, ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ಹಲವಾರು ಅಹಿತಕರ ಘಟನೆಗಳಿಗೆ ಬೆಂಗಳೂರು ಬಂದ್ ಸಾಕ್ಷಿಯಾಯಿತು.
ಬೆಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ನಗರದ 8 ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಒಟ್ಟು 13 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ 12 ಮಂದಿಯನ್ನು ಬಂಧಿಸಿದ್ದಾರೆ.
Pertaining to this incident, an FIR has been registered at Bagalgunte Police Station. Three accused have also been arrested. Further investigation is underway. https://t.co/kymhrdE0L9
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 11, 2023
ರ್‍ಯಾಪಿಡೋ ಸವಾರರ ಮೇಲೆ ಹಲ್ಲೆ
- ಪ್ರತಿಭಟನಾನಿರತರು ಬೇಕಂತಲೇ ರ್‍ಯಾಪಿಡೋ ಬುಕ್ ಮಾಡಿ ರ್‍ಯಾಪಿಡೋ ಸವಾರರನ್ನು ತಾವಿರುವ ಸ್ಥಳಕ್ಕೆ ಕರೆಯಿಸಿ ಅವರ ಹೆಲ್ಮೆಟ್ ತೆಗೆದು ಹಲ್ಲೆ ಮಾಡಿದ ಹಲವು ಘಟನೆಗಳು ನಡೆದಿವೆ. ರ್‍ಯಾಪಿಡೋ ಸವಾರನ ಮೇಲೆ ಹಲ್ಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
- ಪುನೀತ್, ಮಣಿ, ಶರಣ್ ಬಂಧಿತರು. ಪ್ರತಿಭಟನಾನಿರತರು ವಿಜಯ್‌ಕುಮಾರ್ ಎಂಬಾತ ರ್‍ಯಾಪಿಡೋ ಸವಾರನ ಮುಖಕ್ಕೆ ಮೊಟ್ಟೆ ಹೊಡೆದು ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಏರಪೋರ್ಟ್ ಕಡೆಯಿಂದ ಬರುತ್ತಿದ್ದ ಎರಡು ಕ್ಯಾಬ್‌ಗಳನ್ನು ಮೂವರು ಪ್ರತಿಭಟನಾನಿರತರು ಚಿಕ್ಕಜಾಲ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ಗಾಜು ಧ್ವಂಸ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಆಟೋ ಚಾಲಕರ ಸಂಘದ ಸದಸ್ಯರಾದ ವಿಜಯಕುಮಾರ್, ನಾಗರಾಜ್, ನಾರಾಯಣಗೌಡ ಎಂಬವರನ್ನು ಬಂಧಿಸಲಾಗಿದೆ.
- ಪ್ರತಿಭಟನೆಗೆ ಸಹಕಾರ ನೀಡದ ಹಳದಿ ಬೋರ್ಡ್ ಕಾರುಗಳು, ಸಣ್ಣ-ಪುಟ್ಟ ಗೂಡ್ಸ್ ವಾಹನ, ಆಟೋ ಹಾಗೂ ಚಾಲಕರ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಲಾಗಿದೆ. ಆಟೋ, ಕಾರುಗಳ ಗಾಜು ಧ್ವಂಸಗೊಳಿಸಲಾಗಿದೆ. ನಗರದ ಗೊರಗುಂಟೆಪಾಳ್ಯ, ರಾಜ್‌ಕುಮಾರ್ ರಸ್ತೆಯಲ್ಲಿ ಎರಡು ಆಟೋ ಅಡ್ಡಗಟ್ಟಿ ಚಕ್ರದ ಗಾಳಿ ಬಿಟ್ಟು ಬೆದರಿಕೆ ಹಾಕಿದ ಘಟನೆ ನಡೆದಿದೆ.
- ಮೇಖ್ರಿ ವೃತ್ತದ ಬಳಿ ಕಾರು ಚಾಲಕನಿಗೆ ಬೆದರಿಕೆ ಹಾಕಿ, ಆತನ ಕಾರಿನ ಹಿಂಬದಿ ಚಕ್ರ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಸಹಕಾರ ನಗರದಲ್ಲಿ ಕ್ಯಾಬ್‌ನ ಒಳಭಾಗ ಮತ್ತು ಚಾಲಕನಿಗೆ ಮೊಟ್ಟೆ ಒಡೆದು ದೌರ್ಜನ್ಯ ಎಸಗಿದ್ದಾರೆ.
- ಮೌರ್ಯ ವೃತ್ತ ಮತ್ತು ಸುಜಾತಾ ಬಳಿ ಐದಾರು ಗೂಡ್ಸ್ ವಾಹನ ಚಾಲಕರಿಗೆ ಥಳಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ರ್‍ಯಾಪಿಡೋ ಚಾಲಕನ ಮೇಲೆ ಹತ್ತಕ್ಕೂ ಹೆಚ್ಚು ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.
- ಮೌರ್ಯ ಸರ್ಕಲ್ ಬಳಿ ಬಾಡಿಗೆ ಹೋಗುತ್ತಿದ್ದ ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.
ಬೆಂಗಳೂರು ಬಂದ್ ವೇಳೆ ಹಲವಾರು ಅಹಿತಕರ ಘಟನೆಗಳು ನಡೆದಿವೆ. ಕೇಂದ್ರ ಮತ್ತು ಆಗ್ನೇಯ ವಿಭಾಗದಿಂದ ತಲಾ ಒಂದು ಪ್ರಕರಣಗಳು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಉತ್ತರ ವಿಭಾಗದಲ್ಲಿ ಎರಡು ಪ್ರಕರಣ ದಾಖಲಾಗಿದ್ದು, 6 ಮಂದಿ ಬಂಧಿಸಲಾಗಿದೆ. ಈಶಾನ್ಯ ವಿಭಾಗದಲ್ಲಿ 2 ಪ್ರಕರಣ ದಾಖಲಾಗಿದ್ದು, 3 ಮಂದಿ ಬಂಧಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ 7 ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಬಂದ್ | ಫ್ರೀಡಂ ಪಾರ್ಕ್‌ನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಆಟೋ, ಕ್ಯಾಬ್ ಚಾಲಕರು
ಮೆಜೆಸ್ಟಿಕ್, ಮೇಖ್ರಿ ವೃತ್ತ, ಹೆಬ್ಬಾಳ, ಇಂದಿರಾನಗರ, ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಸೇರಿದಂತೆ ಹಲವೆಡೆ ಪ್ರತಿಭಟನಾನಿರತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದರು. ಈ ಪರಿಣಾಮ ನಗರದಲ್ಲಿ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.