ಹೋಟೆಲ್ ಮಾಲೀಕರೊಬ್ಬರಿಗೆ ಆನ್‌ಲೈನ್ ಪೇಮೆಂಟ್ ಆ್ಯಪ್‌ನಲ್ಲಿ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ನಂಬಿಸಿ ಅಕೌಂಟ್‌ನಿಂದ ಸಾವಿರಾರು ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ದುಷ್ಕರ್ಮಿಗಳು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬಿರಿಯಾನಿ ಹೋಟೆಲ್ ಮಾಲೀಕ ಪಾರುಲ್ ಷಾ ಮೋಸಹೋದ ವ್ಯಕ್ತಿ. ಇವರು ನಗರದ ದಯಾನಂದ ಲೇಔಟ್‌ನ ರಾಮಮೂರ್ತಿನಗರದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದಾರೆ.
ಎಂದಿನಂತೆ ಶನಿವಾರವೂ ಪಾರುಲ್ ಷಾ ಹೋಟೆಲ್ ಕೆಲಸದಲ್ಲಿ ತೋಡಗಿದ್ದರು. ಈ ವೇಳೆ, ಇಬ್ಬರು ಅಪರಿಚಿತರು ಸುಮಾರು ಮಧ್ಯಾಹ್ನ 1 ಗಂಟೆಗೆ ಹೋಟೆಲ್‌ಗೆ ಬಂದಿದ್ದಾರೆ. ತಮ್ಮನ್ನು ಬ್ಯಾಂಕ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಹೊಟೇಲ್ ಮಾಲೀಕ ಪಾರುಲ್ ಷಾ ಅವರಿಗೆ ಆ್ಯಪ್ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿದರೇ ನಿತ್ಯ ₹300 ಕ್ಯಾಶ್‌ಬ್ಯಾಕ್ ಬರುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಪಾರುಲ್ ಷಾ ಅವರು ಅಪರಿಚಿತರ ಕೈಗೆ ಆ್ಯಪ್ ಡೌನ್‌ಲೋಡ್ ಮಾಡಲು ತಮ್ಮ ಮೊಬೈಲ್ ಕೊಟ್ಟಿದ್ದಾರೆ. ಜತೆಗೆ ತಮ್ಮ ಬ್ಯಾಂಕ್ ಮಾಹಿತಿ ಸಹ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯ
ಅಪರಿಚಿತರು ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಆಗಿದೆ ಎಂದು ಹೇಳಿ, ವಾಪಾಸ್ ಮೊಬೈಲ್ ನೀಡಿ ತೆರಳಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಪಾರುಲ್ ಷಾ ಅವರ ಬ್ಯಾಂಕ್ ಖಾತೆಯಿಂದ ₹52 ಸಾವಿರ ಹಣ ವರ್ಗಾವಣೆಯಾಗಿರುವುದು ತಿಳಿದಿದೆ.
ಕೂಡಲೇ ಗಾಬರಿಗೊಂಡ ಪಾರುಲ್ ಷಾ ಅವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ.
ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.