ರಾಜ್ಯ ರಾಜಧಾನಿ ಬೆಂಗಳೂರಿನ ರಾಜಕಾಲುವೆಗಳ ಮೇಲೆ ಹೊಸದಾಗಿ ಒತ್ತುವರಿಗಳು ಇದ್ದಲ್ಲಿ, ಅಂತಹ ಒತ್ತುವರಿಗಳನ್ನು ತುರ್ತಾಗಿ ಗುರುತಿಸಿ, ಸದರಿ ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿದೆ. ಅದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜಕಾಲುವೆಗಳ ಮೇಲೆ ಇರುವ ಒತ್ತುವರಿಗಳನ್ನು ಗುರುತಿಸಲು ಕ್ರಮಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ, “ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಾಜಕಾಲುವೆಗಳಲ್ಲಿ ಒತ್ತುವರಿ/ಅತಿಕ್ರಮಣಗಳನ್ನು ಗುರುತಿಸಲು ಸಾರ್ವಜನಿಕರು ಕೈಜೋಡಿಸಿದಲ್ಲಿ ಹೆಚ್ಚಿನ ಒತ್ತುವರಿಗಳನ್ನು ಗುರುತಿಸುವಲ್ಲಿ ಪಾಲಿಕೆಗೆ ಸಹಕಾರಿಯಾಗುತ್ತದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹7.83 ಕೋಟಿ ಮೌಲ್ಯದ ಡ್ರಗ್ಸ್ ವಶ; 14 ಆರೋಪಿಗಳ ಬಂಧನ
“ಸದರಿ ಇರುವ ಒತ್ತುವರಿಗಳನ್ನು ತೆರವುಗೊಳಿಸಿಕೊಂಡು ರಾಜಕಾಲುವೆಗಳನ್ನು ನಿರ್ಮಾಣ ಮಾಡುವುದರಿಂದ ಮಳೆನೀರು ಸರಾಗವಾಗಿ ಹರಿದು ಹೋಗುತ್ತದೆ. ಇದರಿಂದ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾನಿಯನ್ನು ತಡೆಗಟ್ಟಬಹುದು. ಹಾಗಾಗಿ, ಸ್ಥಳೀಯ/ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ರಾಜಕಾಲುವೆಗಳ ಮೇಲೆ ಯಾವುದಾದರೂ ಒತ್ತುವರಿಗಳು ಮಾಡಿಕೊಂಡಿರುವುದು ತಮ್ಮ ಗಮನಕ್ಕೆ ಬಂದಿದ್ದರೆ, ಅಂತಹ ಒತ್ತುವರಿಗಳ ಮಾಹಿತಿಯನ್ನು ಭಾವಚಿತ್ರದೊಂದಿಗೆ ಆಯಾ ವಿಭಾಗದ ಕಾರ್ಯಪಾಲಕ ಅಭಿಯಂತರರು, ಬೃಹತ್ ನೀರುಗಾಲುವೆ ರವರಿಗೆ ಸೆ.20ರ ಮಧ್ಯಾಹ್ನ 2 ಗಂಟೆಯ ಒಳಗಾಗಿ ಸಲ್ಲಿಸಿ” ಎಂದು ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರ ಪ್ರಹ್ಲಾದ್ ಮನವಿ ಮಾಡಿದ್ದಾರೆ.