- ನೀರು ಕಲುಷಿತವಾಗುತ್ತಿರುವ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದ ಬಿಡಬ್ಲೂಎಸ್‌ಎಸ್‌ಬಿ
- ಇನ್ನೆರಡು ದಿನಗಳಲ್ಲಿ ಕಲುಷಿತ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದ ಅಧಿಕಾರಿ
ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾನಗರದ ಮೈಕೆಲ್ ಪಾಳ್ಯದ ನಿವಾಸಿಗಳಿಗೆ ಕಳೆದ ಮೂರು ತಿಂಗಳಿನಿಂದ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಈ ನೀರು ಸೇವನೆಯಿಂದ ಹಲವು ಜನರು ಅನಾರೋಗ್ಯಕ್ಕೀಡಾಗಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ನೀರು ಕಲುಷಿತವಾಗುತ್ತಿರುವ ಸಮಸ್ಯೆ ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
“ಸುಮಾರು 200 ಮನೆಗಳ ಮೇಲೆ ಈ ಕಲುಷಿತ ನೀರು ಪರಿಣಾಮ ಬೀರಿದೆ. ಈ ನೀರು ಕುಡಿದು ಕೆಲವು ನಿವಾಸಿಗಳು ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಬಿಡಬ್ಲೂಎಸ್‌ಎಸ್‌ಬಿಗೆ ಪ್ರತಿ ಬಾರಿ ದೂರು ನೀಡಿದಾಗ, ಅಧಿಕಾರಿಗಳು ಬಂದು ಸಮಸ್ಯೆಯನ್ನು ಪರಿಹರಿಸಲಾಗಿದೆ ಎನ್ನುತ್ತಾರೆ. ಆದರೆ, ಮುಂದಿನ ಮೂರು ದಿನಗಳಲ್ಲಿ ಮತ್ತೆ ಸಮಸ್ಯೆ ಮರುಕಳಿಸುತ್ತದೆ. ನಿವಾಸಿಗಳು ಮತ್ತೆ ಸಂಪ್ ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕಾಗಿದೆ. ಸಮಸ್ಯೆ ಬಗೆಹರಿದಿದೆ ಎಂದು ಭಾವಿಸಿ ಹಲವರು ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ” ಎಂದು ಸ್ಥಳೀಯ ನಿವಾಸಿ ಅಲೆಕ್ಸಾಂಡರ್ ಪಿಜೆ ಹೇಳಿದರು.
“ಬಿಎಬ್ಲೂಎಸ್‌ಎಸ್‌ಬಿ ಕೇವಲ ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಂಡಿದೆ. ಮಾಲಿನ್ಯದ ಮೂಲವನ್ನು ಗುರುತಿಸಲು ವಿಫಲವಾಗಿದೆ. ಆದರೆ, ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ” ಎಂದು ಮತ್ತೊಬ್ಬ ನಿವಾಸಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ | ಜುಲೈನಿಂದ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!
“ಕಳೆದ ಮೂರು ತಿಂಗಳ ಹಿಂದೆ ಒಮ್ಮೆ ಮಾತ್ರ ಕಲುಷಿತ ನೀರು ಸರಬರಾಜು ಆಗುತ್ತಿರುವ ಬಗ್ಗೆ ವರದಿಯಾಗಿದೆ. ನಾವು ಅದನ್ನು ಸರಿಪಡಿಸಿದ್ದೇವೆ. ಇದು ಎರಡನೇ ಬಾರಿಗೆ ಸಂಭವಿಸಿದೆ. ನಾವು ಸಮಸ್ಯೆಯ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಶುದ್ಧ ನೀರು ಪೂರೈಕೆಯಾಗಲಿದೆ” ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್ ಕುಮಾರ್ ನಾಯಕ್ ಎಲ್ ಹೇಳಿದರು.
“ನಿವಾಸಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬಿಡಬ್ಲ್ಯುಎಸ್‌ಎಸ್‌ಬಿ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ” ಎಂದು ಅವರು ಹೇಳಿದರು.
ಕಳೆದ ವಾರ ಇಂದಿರಾನಗರ 1ನೇ ಹಂತದಿಂದ ಇದೇ ರೀತಿಯ ಕಲುಷಿತ ನೀರಿನ ಘಟನೆಗಳು ವರದಿಯಾಗಿದ್ದವು.