- ರಾಥೋಡ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ
- ರಾಥೋಡ್ ಅವರ ಮನೆಯ ಎರಡು ಗೋಡೆಗಳು ಕುಸಿದಿದೆ
ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಪೋಟ ಸಂಭವಿಸಿದೆ. ವಿನೋದ್ ರಾಥೋಡ್(44) ಎಂಬುವವರು ಗಾಯಗೊಂಡಿದ್ದಾರೆ.
ವಿನೋದ್ ರಾಠೋಡ್ ಅವರು ಭದ್ರಪ್ಪ ಲೇಔಟ್‌ನ 5ನೇ ಅಡ್ಡರಸ್ತೆಯ, 7ನೇ ಮುಖ್ಯರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ನೆಲ ಅಂತಸ್ತಿನ ನಿವಾಸಿ. ಇವರು ಮೂಲತಃ ಮಧ್ಯಪ್ರದೇಶದವರು.
“ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ವಿನೋದ್ ಅವರು 25 ಪ್ರತಿಶತದಷ್ಟು ಸುಟ್ಟಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ವಿನೋದ್ ಬೆಳಗ್ಗೆ 7 ಗಂಟೆ ಸುಮಾರಿಗೆ ಚಹಾ ತಯಾರಿಸಲು ಗ್ಯಾಸ್ ಸ್ಟೌವ್ ಹೊತ್ತಿಸಲು ಪ್ರಯತ್ನಿಸಿದ್ದಾರೆ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ಕಾರಣ ಅದನ್ನು ಹೊತ್ತಿಸಿದ ತಕ್ಷಣ ಸ್ಫೋಟಗೊಂಡು ಕೈ ಕಾಲುಗಳಿಗೆ ಗಾಯಗಳಾಗಿವೆ. ಗಾಳಿಯಲ್ಲಿ ಬೆಂಕಿ ಚೆಂಡು ಸಿಡಿದ ಪರಿಣಾಮ ರಾಥೋಡ್ ಅವರ ಮನೆಯ ಎರಡು ಗೋಡೆಗಳು ಕುಸಿದಿದೆ. ಕೆಲ ಗೋಡೆಗಳು ಬಿರುಕು ಬಿಟ್ಟು ವಾಲಿವೆ. ಅಡುಗೆ ಮನೆಯಲ್ಲಿದ್ದ ವಸ್ತುಗಳು ಹಾಗೂ ಪೀಠೋಪಕರಣಗಳು ಎಲ್ಲ ಚಿಲ್ಲಾಪಿಲ್ಲಿಯಾಗಿ ಬಿದ್ದಿವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 45 ರೌಡಿಶೀಟರ್‌ಗಳ ಗಡಿಪಾರಿಗೆ ಮುಂದಾದ ಪೊಲೀಸ್ ಇಲಾಖೆ
“ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ, ಟ್ಯಾಂಕರ್‌ನೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ರಾಥೋಡ್ ಅವರನ್ನು ಅವಶೇಷಗಳಡಿಯಿಂದ ಹೊರತೆಗೆದು ಅವರನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಬೆಂಕಿ ಅವಘಡದ ಬಗ್ಗೆ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.