- ಮತದಾನ ಉತ್ಸವದಲ್ಲಿ ತಪ್ಪದೆ ಭಾಗವಹಿಸಿ ಮತದಾನ ಮಾಡುವಂತೆ ಎಲ್ಲರಿಗೂ ತಿಳಿಸಿ
- ಎಲ್ಲರಿಂದಲೂ ಮತದಾನ ಮಾಡಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ
“ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಎಲ್ಲರೂ ಮೇ 10ರಂದು ತಪ್ಪದೆ ಮತದಾನ ಮಾಡುವ ಸಲುವಾಗಿ ಸಂಬಳ ಸಹಿತ ರಜೆ ನೀಡಲಾಗುವುದು” ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಭರವಸೆ ನೀಡಿದರು.
ಎಲೆಕ್ಟ್ರಾನಿಕ್ ಸಿಟಿಯ ಟೆಕ್ ಮಹೀಂದ್ರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಅವರು, “ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಗಳ ಸಿಇಒಗಳು ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳಿಗೆ ಮತದಾನ ಉತ್ಸವದಲ್ಲಿ ತಪ್ಪದೆ ಭಾಗವಹಿಸಿ ಮತದಾನ ಮಾಡಲು ತಿಳಿಸಿ” ಎಂದರು.
“ಬೆಂಗಳೂರು ವ್ಯಾಪ್ತಿಯಲ್ಲಿ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮತದಾನ ಮಾಡುವ ಒಲವು ಹೆಚ್ಚಾಗಿ ಇರುವುದಿಲ್ಲ. ಈ ಸಂಬಂಧ ಅವರಲ್ಲಿರುವಂತಹ ತಪ್ಪು ಕಲ್ಪನೆ ಹಾಗೂ ಆಲೋಚನೆಗಳನ್ನು ಬದಲಿಸಿ ಎಲ್ಲರಿಂದಲೂ ಮತದಾನ ಮಾಡಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ” ಎಂದು ಹೇಳಿದರು.
“ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿ ಹೆಚ್ಚು ಮತದಾನ ಮಾಡಿಸುವ ಉದ್ದೇಶವನ್ನಿಟ್ಟುಕೊಂಡು, ಎಲ್ಲ ಕಡೆ ಮತದಾನ ಜಾಗೃತಿ ಜಾಥ, ನಾಟಕ ಸೇರಿದಂತೆ ನಮ್ಮ ಬೆಂಗಳೂರು ಐಕಾನ್ಸ್‌ಗಳ ಮೂಲಕ ಮತದಾರರು ತಪ್ಪದೆ ಮತಚಲಾಯಿಸುವಂತೆ ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯುತ್ ಪ್ರವಹಿಸಿ ಕೇರಳ ಮೂಲದ ವ್ಯಕ್ತಿ ಸಾವು
ಈ ವೇಳೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸಂಗಪ್ಪ, ಜಂಟಿ ಆಯುಕ್ತರಾದ ಕೃಷ್ಣಮೂರ್ತಿ, ನಾನಾ ಸಂಸ್ಥೆಗಳ ಸಿಇಒಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.