- ರಾಜ್ಯದಲ್ಲಿ ಒಟ್ಟು 4,790 ಡೆಂಗ್ಯೂ ಪ್ರಕರಣಗಳು ದಾಖಲು
- ಬೆಂಗಳೂರಿನಲ್ಲಿ ಡೆಂಗ್ಯೂ ಸಾವಿನ ಪ್ರಕರಣಗಳು ವರದಿಯಾಗಿಲ್ಲ
ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಎಲ್ಲೆಡೆ ತಂಪು ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಜುಲೈ ತಿಂಗಳಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ. 140ರಷ್ಟು ಏರಿಕೆಯಾಗಿದೆ.
“ಈ ವರ್ಷ ಜೂನ್ನಲ್ಲಿ 690 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಜುಲೈ 1 ಮತ್ತು ಜುಲೈ 30ರ ನಡುವೆ ಈ ಸಂಖ್ಯೆ 1,649 ಕ್ಕೆ ಏರಿದೆ. ಅಂದರೆ, ಶೇ. 140 ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜುಲೈ 29 ರವರೆಗೆ ರಾಜ್ಯದಲ್ಲಿ ಒಟ್ಟು 4,790 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಶೇಕಡಾ 50% ಅಂದರೆ ಸುಮಾರು 2,500ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದೆ” ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
“ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ, ಮನೆಗಳ ಸುತ್ತ, ಕಂಟೈನರ್, ಹಳೆಯ ಟೈರ್ ಹಾಗೂ ತೆಂಗಿನ ಚಿಪ್ಪು ಸೇರಿದಂತೆ ಮುಂತಾದವುಗಳಲ್ಲಿ ನಿಂತ ಮಳೆನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬೆಂಗಳೂರಿನ ಪೂರ್ವ, ಪಶ್ಚಿಮ ಭಾಗದಲ್ಲಿ ವರದಿಯಾಗಿದೆ. ಜುಲೈ ತಿಂಗಳ ಮೊದಲ 30 ದಿನಗಳಲ್ಲಿ ಪೂರ್ವ ವಲಯದಲ್ಲಿ 442 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ವಲಯದಲ್ಲಿ 348 ಹಾಗೂ ಮಹದೇವಪುರದಲ್ಲಿ 320 ಪ್ರಕರಣಗಳು ವರದಿಯಾಗಿವೆ” ಎಂದರು.
“1, 2 ಮತ್ತು 3 ಸಿರೊಟೈಪ್ ತಳಿಗಳು ವರದಿಯಾಗಿವೆ. ಸೆರೋಟೈಪ್ 2 ರಕ್ತಸ್ರಾವ, ಹೈಪೊಟೆನ್ಷನ್ ಮತ್ತು ಮಲ್ಟಿಆರ್ಗನ್ ವೈಫಲ್ಯದಂತಹ ಹೆಚ್ಚಿನ ತೊಡಕುಗಳನ್ನು ಉಂಟುಮಾಡುತ್ತದೆ. ಆದರೆ, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ” ಎಂದು ರಾಷ್ಟ್ರೀಯ ವೆಕ್ಟರ್ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಉಪ ನಿರ್ದೇಶಕ ಡಾ ಮಹಮೂದ್ ಷರೀಫ್ ತಿಳಿಸಿದರು.
“ಡೆಂಗ್ಯೂ ಪ್ರಕರಣದ ಹೆಚ್ಚಳದಿಂದ ನಗರದ ವೈದ್ಯರು ಹೆಚ್ಚು ಕಾರ್ಯೋನ್ಮುಖರಾಗಿದ್ದಾರೆ. ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಎರಡು ಘಟಕಗಳಿವೆ. ನಾನು ಚಿಕಿತ್ಸೆ ನೀಡುವ ಘಟಕಕ್ಕೆ 10 ಡೆಂಗ್ಯೂ ರೋಗಿಗಳು ದಾಖಲಾಗಿದ್ದಾರೆ” ಎಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಸಲಹೆಗಾರ ವೈದ್ಯ ಡಾ.ರಾಹಿಲ್ ಎ.ವೈ ಹೇಳಿದರು.
“ಹೆಚ್ಚಿನ ರೋಗಿಗಳು ಒಂದು ವಾರದಲ್ಲಿ ಚೇತರಿಸಿಕೊಳ್ಳುತ್ತಾರೆ. ಅಲ್ಲದೆ, ಅನೇಕರಿಗೆ ಪ್ಲೇಟ್ಲೆಟ್ ವರ್ಗಾವಣೆಯ ಅಗತ್ಯವಿರುವುದಿಲ್ಲ. ಅಗತ್ಯವಿದ್ದರೆ ಪ್ಲೇಟ್ಲೆಟ್ಗಳನ್ನು ಸಂಗ್ರಹಿಸಲು ಸಾಧ್ಯವಿದೆ. ಇನ್ನೂ ಬೇರೆ ಯಾವುದೇ ಕೊರತೆಯನ್ನು ಎದುರಿಸಿಲ್ಲ” ಎಂದು ತಿಳಿಸಿದರು.
ಸೊಳ್ಳೆ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಿದ ಬಿಬಿಎಂಪಿ
ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಕಾರಣ ಸೊಳ್ಳೆ ಮತ್ತು ಲಾರ್ವಾ ನಿಯಂತ್ರಣ ಕ್ರಮಗಳನ್ನು ಪಾಲಿಕೆ ತೀವ್ರಗೊಳಿಸಿದೆ.
“ಆರೋಗ್ಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಆವರಣವನ್ನು ಸ್ವಚ್ಛವಾಗಿಡಲು ಮತ್ತು ಮಕ್ಕಳ ಪೋಷಕರು ಹಾಗೂ ನೆರೆಹೊರೆಯವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಪಾಲಿಕೆ ಅಧಿಕಾರಿಗಳು ಪ್ರದೇಶವಾರು ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ, ಆಸ್ಪತ್ರೆಗಳು ಮತ್ತು ಕ್ಲಿನಿಕಲ್ ಫಲಿತಾಂಶಗಳನ್ನು ಸಹ ಟ್ರ್ಯಾಕ್ ಮಾಡುತ್ತಿದ್ದೇವೆ” ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಕೆವಿ ತ್ರಿಲೋಕ್ ಚಂದ್ರ ಹೇಳಿದರು.
“ಜಾಗೃತಿ ಮೂಡಿಸಲು ಹೋಟೆಲ್ಗಳ ಸಂಘ, ಆರ್ಡಬ್ಲ್ಯೂಎಗಳು ಹಾಗೂ ಅಪಾರ್ಟ್ಮೆಂಟ್ಗಳ ಸಂಘಗಳ ಸಹಾಯ ಕೋರಲಾಗಿದೆ. ಜನರು ಮುಂಜಾಗ್ರತೆ ವಹಿಸಬೇಕು ಮತ್ತು ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯಬೇಕು. ಬೆಂಗಳೂರಿನಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಸದ್ಯಕ್ಕೆ ಪ್ಲೇಟ್ಲೆಟ್ಗಳ ಕೊರತೆಯೂ ಇಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯಾರ್ಥಿನಿಯರೊಂದಿಗೆ ವಿದ್ಯಾರ್ಥಿಗಳ ಅಶ್ಲೀಲ ವರ್ತನೆ
“ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕರ್ನಾಟಕದಾದ್ಯಂತ ಆರೋಗ್ಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಅಗತ್ಯವಿರುವ ಎಲ್ಲ ಔಷಧಿಗಳು ಇವೆ. ಡೆಂಗ್ಯೂ ಹರಡುವಿಕೆಯನ್ನು ನಿಭಾಯಿಸಲು ಆಸ್ಪತ್ರೆಗಳು ಸನ್ನದ್ಧವಾಗಿವೆ. ಪ್ಲೇಟ್ಲೆಟ್ಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಬ್ಲಡ್ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ ರಂದೀಪ್ ಹೇಳಿದರು.