- ವಿದ್ಯಾರ್ಥಿನಿಗೆ ಸಾರಿಗೆಯನ್ನು ರದ್ದುಗೊಳಿಸಿದ ಶಾಲಾ ಆಡಳಿತ ಮಂಡಳಿ
- ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ; ಶಾಲಾ ಆಡಳಿತ ಮಂಡಳಿ
ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ 5ನೇ ತರಗತಿಯ ಬಾಲಕಿಯನ್ನು ತಡವಾಗಿ ಮನೆಗೆ ಬಿಟ್ಟಿದ್ದಕ್ಕಾಗಿ ಪೋಷಕರು ಶಾಲೆಯ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ಸಂಸ್ಥೆಗೆ ದೂರು ನೀಡಿದ್ದಾರೆ.
ಕ್ರಿಸಾಲಿಸ್ ಹೈ ಎಂಬ ಖಾಸಗಿ ಶಾಲೆಯ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (KSCPCR) ಪೋಷಕರು ದೂರು ನೀಡಿದ್ದು, “ಗುರುವಾರ ಮಧ್ಯಾಹ್ನ 3.20ರ ಸುಮಾರಿಗೆ ಮಗಳು ಮನೆಗೆ ಬರಬೇಕಿತ್ತು. ಆದರೆ, ಆಕೆ ಮನೆಗೆ ಬಂದಿರಲಿಲ್ಲ. ಇದರಿಂದ ನಾವು ತುಂಬಾ ಗಾಬರಿಗೊಂಡೆವು. ಮಧ್ಯಾಹ್ನ 3 ಗಂಟೆಯಿಂದ ಮಗಳನ್ನು ಶಾಲಾ ವಾಹನ ಡ್ರಾಪ್ ಮಾಡುವ ಸ್ಥಳದಲ್ಲಿ ಕಾಯುತ್ತಿದ್ದೆವು ಅಂತಿಮವಾಗಿ, ಸಂಜೆ 4.40 ರ ಸುಮಾರಿಗೆ ಶಾಲಾ ವಾಹನದಲ್ಲಿ ಅವಳನ್ನು ಡ್ರಾಪ್ ಮಾಡಿದರು. ವಿಳಂಬದ ಬಗ್ಗೆ ಶಾಲೆಯಿಂದ ಯಾವುದೇ ಮಾಹಿತಿ ಇರಲಿಲ್ಲ” ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
“ಶಾಲೆಯ ಸಿಬ್ಬಂದಿ ನಮ್ಮ ಮಗಳಿಗೆ ನಮ್ಮ ಮನೆಯ ರಸ್ತೆಯ ಎದುರಿನ ರಸ್ತೆಯ ಬದಿಯಲ್ಲಿ ಬಸ್‌ನಿಂದ ಇಳಿಯುವಂತೆ ಹೇಳಿದ್ದಾರೆ. ಆದರೆ, ರಸ್ತೆ ಅಗಲವಾಗಿರುವುದರಿಂದ ಮತ್ತು ಮಧ್ಯದಲ್ಲಿ ವಿಭಜಕ ಇರುವುದರಿಂದ ಮಗಳಿಗೆ ರಸ್ತೆ ದಾಟಲು ಸಾಧ್ಯವಾಗದ ಕಾರಣ ಅವಳು ಇಳಿಯಲು ನಿರಾಕರಿಸಿದ್ದಾಳೆ. ಸಿಬ್ಬಂದಿಯ ಆದೇಶ ಪಾಲಿಸದ ಕಾರಣ ಅವಳನ್ನು ಶಿಕ್ಷಿಸಲು ಸಿಬ್ಬಂದಿ ಬಸ್ಸಿನಲ್ಲಿದ್ದ ಎಲ್ಲ ಮಕ್ಕಳನ್ನು ಬಿಡುವವರೆಗೂ ಅವಳನ್ನು ಕಾಯುವಂತೆ ಮಾಡಿದರು. ಎಲ್ಲ ಮಕ್ಕಳನ್ನು ಮನೆಗೆ ಬಿಟ್ಟು ನಂತರ ಅವಳನ್ನು ಮನೆಗೆ ತಂದು ಬಿಟ್ಟಿದ್ದಾರೆ” ಎಂದು ಮಗುವಿನ ತಂದೆ ವಿವರಿಸಿದರು.
“ನಡೆದ ಘಟನೆ ಬಗ್ಗೆ ಶಾಲೆಯ ಅಧಿಕಾರಿಗಳ ಮುಂದೆ ಸಮಸ್ಯೆಯನ್ನು ಹೇಳಿದರೆ, ಶಾಲಾ ಆಡಳಿತ ಮಂಡಳಿ ಮಗಳಿಗೆ ಸಾರಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಇಮೇಲ್ ಕಳುಹಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯತಮೆಯನ್ನು ಕೊಂದ ಪ್ರಿಯಕರ
“ನಾವು ಯಾವುದೇ ತಪ್ಪು ಮಾಡಿಲ್ಲ. ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಪೋಷಕರು ತಮ್ಮ ಮಗುವನ್ನು ಕರೆದುಕೊಂಡು ಹೋಗಲು ರಸ್ತೆ ದಾಟಲು ನಿರಾಕರಿಸಿದ್ದರು, ಎಲ್ಲಿಂದ ಮಗುವನ್ನು ಕರೆದುಕೊಂಡು ಹೋಗಿರುತ್ತಾರೋ ಅಲ್ಲಿಗೆ ತಂದು ಬಿಡಬೇಕು ಎಂದು ಹೇಳಿದರು. ಹೀಗಾಗಿ ಶಾಲೆಯ ಒಬ್ಬ ಅಟೆಂಡೆಂಟ್ ಬಾಲಕಿಯನ್ನು ಇನ್ನೊಂದು ಬದಿಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರ ಮನವಿಯನ್ನು ಪಾಲಿಸುವುದರಿಂದ ಬಸ್‌ನಲ್ಲಿರುವ ಇತರ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ” ಎಂದು ಶಾಲೆಯ ಸಿಬ್ಬಂದಿಯೊಬ್ಬರು ತಿಳಿಸಿದರು.
ಶಾಲೆಯ ವಿರುದ್ಧ ಪೋಷಕರು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದಾರೆ.