ಬೆಂಗಳೂರಿನ ನಾನಾ ಕಾಲೇಜು, ಕ್ಲಬ್ ಹಾಗೂ ಪಬ್‌ಗಳಲ್ಲಿ ಗಾಂಜಾ ಸೇವನೆ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ರಗ್ಸ್ ಜಾಲವನ್ನು ಭೇದಿಸಲು ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ. ಅದರಂತೆಯೇ ಇಲಾಖೆ ಪೊಲೀಸ್ ಮಾಹಿತಿದಾರರನ್ನು ಇನ್ಫಾರ್ಮರ್‌ಗಳನ್ನು ನಿಯೋಜನೆ ಮಾಡಿದೆ. ಆದರೆ, ಡ್ರಗ್ಸ್ ಜಾಲವನ್ನು ಭೇದಿಸಲು ನಿಯೋಜನೆ ಮಾಡಲಾದ ಪೊಲೀಸ್ ಇನ್ಫಾರ್ಮರ್‌ಗಳೇ ಗಾಂಜಾ ಸೇವನೆ ಮಾಡಿದ ವಿದ್ಯಾರ್ಥಿಗಳನ್ನು ಹಿಡಿದು ಲಕ್ಷಾಂತರ ಹಣವನ್ನು ವಸೂಲಿ ಮಾಡಿದ್ದಾರೆ. ಹೀಗೆ ಸೈಬರ್ ಕ್ರೈಂ ಪೊಲೀಸರೆಂದು ಬಿಂಬಿಸಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಿಂದ ₹1.7 ಲಕ್ಷ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪಿಗಳು ಟ್ರ್ಯಾಪ್ ಆದ ವಿದ್ಯಾರ್ಥಿಗಳನ್ನು ಹಿಡಿದು ಬೆದರಿಕೆ ಹಾಕುತ್ತಿದ್ದರು. ಹಣ ವಸೂಲಿ ಮಾಡುತ್ತಿದ್ದರು. ಈ ವಿಚಾರವನ್ನು ಹೊರಗಡೆ ಬಾಯಿಬಿಟ್ಟರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಇದೇ ಮಾದರಿಯಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಾಗಡಿ ರಸ್ತೆಯ ರಾಕೇಶ್ ಸಿ (26), ಲೋಕೇಶ್ ಕುಮಾರ್ (20) ಹಾಗೂ ವಿದ್ಯಾರಣ್ಯಪುರ ನಿವಾಸಿ ಅರುಣ್ ಕುಮಾರ್ (27) ಬಂಧಿತರು.
ಜುಲೈ 16 ರಂದು ಮೂವರು ಆರೋಪಿಗಳು ‘ನೀನು ಮಾದಕ ವಸ್ತು ಸೇವನೆ ಮತ್ತು ದಂಧೆಯಲ್ಲಿ ತೊಡಗಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ’ ಎಂದು ಮಿಶಾನ್ ಎಂಬುವವರಿಗೆ ಬೆದರಿಸಿ ಅವರನ್ನು ಬಿಇಎಲ್ ರಸ್ತೆಯಲ್ಲಿರುವ ಹಾಸ್ಟೆಲ್‌ನಿಂದ ಅಪಹರಿಸಿದ್ದರು. ಕಾರಿನೊಳಗೆ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ನಗರದಾದ್ಯಂತ ಸುತ್ತಾಡಿಸಿ, ಮಿಶಾನ್ ಅವರ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡು ಅವರ ಖಾತೆಗಳಿಗೆ ₹1.72 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದರು.
12 ಗಂಟೆಯ ಸುಮಾರಿಗೆ ಮಿಶಾನ್ ಅವರನ್ನು ಹಾಸ್ಟೆಲ್‌ಗೆ ಬಿಡುವ ಮೊದಲು ನಡೆದ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಜುಲೈ 17 ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಿಶಾನ್ ನೀಡಿದ ದೂರಿನ ಮೇರೆಗೆ ಪೊಲೀಸರು ಜುಲೈ 20 ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳಿಂದ ನಾಲ್ಕು ಮೊಬೈಲ್ ಫೋನ್ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
“ಆರೋಪಿಗಳು ಈ ಹಿಂದೆ ನಾನಾ ಪ್ರಕರಣಗಳಲ್ಲಿ ಮಾಹಿತಿದಾರರಾಗಿ ಪೊಲೀಸರಿಗೆ ಸಹಾಯ ಮಾಡಿದ್ದರು. ಮಿಶಾನ್ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ಸುಲಭ ಗುರಿ ಎಂದು ಪರಿಗಣಿಸಿ ಟಾರ್ಗೆಟ್ ಮಾಡಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 1,344 ಕಿ.ಮೀ ರಸ್ತೆಯ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುತ್ತಿರುವ ಬಿಬಿಎಂಪಿ
“ಆರೋಪಿಗಳ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಬೈಕ್ ಸವಾರನಿಗೆ ಬೆದರಿಸಿ ₹10 ಸಾವಿರ ವಸೂಲಿ ಮಾಡಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಹೇಳಿದ್ದಾರೆ.
“ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಹೊಂದಿರುತಿದ್ದ ಇವರು ಹಲವಾರು ಬಾರಿ ಪೊಲೀಸರಿಗೆ ಮಾಹಿತಿ ನೀಡಿ ಇನ್ಫಾರ್ಮರ್‌ಗಳಾಗಿದ್ದರು. ಬಳಿಕ ಹಣ ಮಾಡಲು ಪೊಲೀಸರ ರೀತಿ ಬಂದು ಸುಲಿಗೆ ಮಾಡಿದ್ದಾರೆ. ನಾವೇ ಪೊಲೀಸರು ಎಂದು ಹೇಳಿಕೊಂಡು ವಂಚನೆ ಮಾಡಿರೊದು ಪತ್ತೆಯಾಗಿದೆ. ತನಿಖೆ ವೇಳೆ 25ಕ್ಕೂ ಅಧಿಕ ಕೃತ್ಯ ಎಸಗಿರೊದಾಗಿ ಮಾಹಿತಿ ಲಭ್ಯವಾಗಿದೆ” ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.