ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ 31ರ ರಾತ್ರಿ ಸುಮಾರು 10 ಗಂಟೆಯಿಂದ ಸತತ ಒಂದೂವರೆ ಗಂಟೆಗಳ ಕಾಲ ಗುಡುಗು, ಮಿಂಚಿನೊಂದಿಗೆ ಧಾರಾಕಾರ ಮಳೆಯಾಗಿದೆ. ಈ ಮಳೆ ಇನ್ನೂ ಐದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಂದೂವರೆ ಗಂಟೆಗಳ ಕಾಲ ಬಿಟ್ಟುಬಿಡದೆ ಜೋರು ಮಳೆಯಾಗಿದ್ದು, ನಗರದೆಲ್ಲೆಡೆ ತಂಪು ವಾತಾವರಣ ನಿರ್ಮಾಣವಾಗಿದೆ. ನಗರದ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹೆಬ್ಬಾಳ, ಸಂಪಂಗಿರಾಮನಗರ, ಗೋರಗುಂಟೆಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ, ಶಾಂತಿನಗರ, ಬೊಮ್ಮಸಂದ್ರ, ಯಲಹಂಕದ ಭದ್ರಪ್ಪ ಲೇಔಟ್, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ ಹಾಗೂ ಶಿವಾಜಿನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ.
ಏಕಾಏಕಿ ಆರಂಭವಾದ ಮಳೆಯಿಂದ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದವು. ಶೇಷಾದ್ರಿಪುರಂ ಅಂಡರ್ ಪಾಸ್‌ನಲ್ಲಿ ಖಾಸಗಿ ಬಸ್ ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿತ್ತು. ಭದ್ರಪ್ಪ ಲೇಔಟ್ ರೈಲ್ವೇ ಅಂಡರ್ ಪಾಸ್‌ನಲ್ಲಿ ಆಟೋ ಒಂದು ಮುಳುಗಿ ನಿಂತಿತ್ತು. ಜತೆಗೆ ಬೆಂಗಳೂರಿನ ನಾನಾ ಕಡೆ ಮರಗಳು ಧರೆಗೆ ಉರುಳಿವೆ.
ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ, ಹಳೆ ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಅಲ್ಲದೆ, ನಗರದಾದ್ಯಂತ ವಾಹನ ದಟ್ಟಣೆ ಉಂಟಾಗಿತ್ತು.
ನಗರದ ನಾನಾ ಕಡೆ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಬ್ಬಂದಿ ಮೋಟರ್ ಬಳಸಿ ನೀರಿನ್ನು ಹೊರ ಹಾಕಲು ಪ್ರಯತ್ನಿಸಿದರು. ಇನ್ನೂ ಕೆಲವು ಮನೆಗಳಿಗೆ ಮಳೆನೀರಿನ ಜತೆಗೆ ಚರಂಡಿ ನೀರು ನುಗ್ಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ?
ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಹೆಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್‌ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ, ಗೋವಿಂದರಾಜನಗರ, ಬಸವೇಶ್ವರನಗರ, ವಿಜಯನಗರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ಒಂದೇ ದಿನ 9 ಸೆಂ.ಮೀ ಮಳೆ ದಾಖಲು
ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಕೊರತೆಯುಂಟಾಗಿದೆ. ರಾಜ್ಯಕ್ಕೆ ಆಗಸ್ಟ್ನಲ್ಲಿ ಶೇ. 74ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ 123 ವರ್ಷಗಳಲ್ಲೇ ದಾಖಲೆಯ ಮಳೆ ಕೊರತೆಯಾಗಿದೆ.
ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಶುರುವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿದಿದೆ. ಒಂದೇ ದಿನ 9 ಸೆಂ.ಮೀ. ಮಳೆ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 52 ಮಿ.ಮೀ ಮಳೆಯಾಗಿದೆ. ಪಶ್ಚಿಮ ವಲಯದ ರಾಜಮಹಲ್ ಗುಟ್ಟಹಳ್ಳಿಯಲ್ಲಿ 111.5 ಮಿ.ಮೀ ಮಳೆಯಾಗಿದ್ದು, ವಿದ್ಯಾರಣ್ಯಪುರದಲ್ಲಿ (89.5 ಮಿ.ಮೀ) ಮಳೆಯಾಗಿದೆ.
“ಸೆಪ್ಟೆಂಬರ್ ಮೊದಲ ದಿನದಿಂದ ವಾಡಿಕೆಯಂತೆ ಮಳೆ ಆರಂಭವಾಗಿದೆ, ಶುಕ್ರವಾರ ಮತ್ತು ಶನಿವಾರ ವಾಡಿಕೆಯಂತೆ ಮಳೆಯಾಗುವ ನಿರೀಕ್ಷೆಯಿದೆ. ಎಷ್ಟು ಪ್ರಮಾಣದ ಮಳೆ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ” ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಹೇಳಿದರು.
ಈ ಮಳೆ ಮುಂದಿನ ಐದು ದಿನ ಮುಂದುವರೆಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಲೈಫ್ ಟೈಂ ಟ್ಯಾಕ್ಸ್ | ಸರ್ಕಾರದ ವಿರುದ್ಧ ಸಿಡಿದೆದ್ದ ಗೂಡ್ಸ್ ವಾಹನ ಮಾಲೀಕರು; ಸೆ. 1ರಂದು ಪ್ರತಿಭಟನೆ
ರಾಜ್ಯದಲ್ಲಿ ಮಳೆ ಪರಿಣಾಮ
ಬೆಂಗಳೂರು ಸೇರಿದಂತೆ ಮಂಡ್ಯ, ಕೋಲಾರ, ರಾಮನಗರ, ಗದಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗಿದೆ.
ಮಳೆ ಇಲ್ಲದೇ ಇಡೀ ತೋಟವೆಲ್ಲಾ ಒಣಗಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಂಜಿಗುಂಟೆ ಗ್ರಾಮದ ಈರಣ್ಣ ಎಂಬವರ ಅಡಿಕೆ ತೋಟ ಇದೀಗ ಮಳೆಯಿಂದ ಜಲಾವೃತವಾಗಿದೆ.