- ಸೂಕ್ತ ಅನುಮತಿಯಿಲ್ಲದೆ ರಸ್ತೆ ಅಗೆದಿದ್ದಲ್ಲಿ ಎಫ್‌ಐಆರ್ ದಾಖಲಿಸಿ ಎಂದ ಬಿಬಿಎಂಪಿ ಮುಖ್ಯ ಆಯುಕ್ತ
- ರಸ್ತೆಗಳನ್ನು ಅಗೆಯುವುದಕ್ಕೂ ಮೊದಲು ಕಂಪನಿಗಳು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ರಸ್ತೆಗಳನ್ನು ಅಗೆದು ಕೇಬಲ್ ಅಳವಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ನಗರದ ವಿವಿ ಪುರಂ, ಸುಂಕೇನಹಳ್ಳಿ, ಜಯನಗರ, ಹೊಂಬೇಗೌಡನಗರ ವಾರ್ಡ್‌ಗಳಲ್ಲಿ ಇತ್ತೀಚೆಗೆ ಅಕ್ರಮವಾಗಿ ರಸ್ತೆಗಳನ್ನು ಅಗೆದು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಹಾಕಿರುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿನ ರಸ್ತೆಗಳನ್ನು ಅಗೆಯುವುದಕ್ಕೂ ಮೊದಲು ಕಂಪನಿಗಳು ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ಆದರೆ, ರಸ್ತೆಗಳನ್ನು ಅಗೆಯಲು ಅನುಮತಿ ಪತ್ರವನ್ನು ಬಳಸದಿರುವುದರ ಜೊತೆಗೆ, ಹಲವು ಕಂಪನಿಗಳು ರಸ್ತೆ ಅಗೆದು ಪುನಃ ಸ್ಥಾಪಿಸಲು ವಿಫಲವಾಗಿವೆ. ರಸ್ತೆ ಅಗೆದು ಹಾಗೆಯೇ ಬಿಡಲಾಗುತ್ತಿದೆ. ಹಾಗಾಗಿ, ಕಂಪನಿಗಳು ಇಂತಹ ಕಾಮಗಾರಿಗಳನ್ನು ಆರಂಭಿಸುವ ಮುನ್ನ ಬಿಬಿಎಂಪಿಯಿಂದ ಅನುಮತಿ ಪಡೆದಿರಬೇಕು.
ಟೆಲಿಕಾಂ ಆಪರೇಟರ್‌ಗಳು, ಒಎಫ್‌ಸಿ ಗುತ್ತಿಗೆದಾರರು ಮತ್ತು ಇಬ್ಬರು ಬಿಬಿಎಂಪಿ ಇಂಜಿನಿಯರ್‌ಗಳ ವಿರುದ್ಧ ಬಿಜೆಪಿ ಬೆಂಗಳೂರು (ದಕ್ಷಿಣ) ಅಧ್ಯಕ್ಷ ಎನ್‌ಆರ್ ರಮೇಶ್ ಅವರು ದೂರು ನೀಡಿದ ನಂತರ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಕ್ರಮ ಕೈಗೊಂಡಿದ್ದಾರೆ.
ಸೂಕ್ತ ಅನುಮತಿಯಿಲ್ಲದೆ ರಸ್ತೆ ಅಗೆದಿದ್ದಲ್ಲಿ ಎಫ್‌ಐಆರ್ ದಾಖಲಿಸಿ ಎಂದು ತುಷಾರ್ ಗಿರಿನಾಥ್ ಅವರು ಬಿಬಿಎಂಪಿಯ ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ವರ್ಷ ರೂ. 4,600 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲು ಗುರಿ ನಿಗದಿಪಡಿಸಿದ ಬಿಬಿಎಂಪಿ
ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಸೇರಿದಂತೆ ನಾಲ್ಕು ಟೆಲಿಕಾಂ ಆಪರೇಟರ್‌ಗಳು ಡಿಸೆಂಬರ್ 2021 ಮತ್ತು ಮಾರ್ಚ್ 2022ರಲ್ಲಿ ವಿವಿ ಪುರಂ, ಸುಂಕೇನಹಳ್ಳಿ, ಜಯನಗರ, ಹೊಂಬೇಗೌಡನಗರ ವಾರ್ಡ್‌ಗಳಲ್ಲಿ 632 ಮೀಟರ್, 1,837 ಮೀಟರ್ ಮತ್ತು 557 ಮೀಟರ್ ವಿಸ್ತರಣೆ ಭೂಗತ ಕೇಬಲ್‌ಗಳನ್ನು ಹಾಕಲು ಅನುಮತಿ ಕೇಳಿದ್ದಾರೆ ಎಂದು ಬಿಜೆಪಿ ಬೆಂಗಳೂರು (ದಕ್ಷಿಣ) ಅಧ್ಯಕ್ಷ ರಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಬಿಬಿಎಂಪಿ ₹11 ಕೋಟಿ ವೆಚ್ಚ ಮಾಡಿದೆ. ಆದರೆ, ಹೊಸದಾಗಿ ಹಾಕಿದ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ನಗರದಾದ್ಯಂತ ಇದೇ ರೀತಿ ಅಕ್ರಮವಾಗಿ ರಸ್ತೆ ಅಗೆಯುವ ದೂರುಗಳು ಬಂದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದರು.