ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ, ಹಲಸೂರು ಗೇಟ್ ಠಾಣೆ ಪೊಲೀಸರು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್ ಪ್ರಹ್ಲಾದ್ ಅವರಿಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕಚೇರಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಆಗಸ್ಟ್ 11ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ, ಒಟ್ಟು 9 ಮಂದಿಗೆ ಸುಟ್ಟಗಾಯಗಳಾಗಿದ್ದವು. ಈ ಪೈಕಿ ಇಬ್ಬರು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆಯ ಪೊಲೀಸರು ಆಗಸ್ಟ್ 12ರಂದು ಬಿಬಿಎಂಪಿ ಅಧಿಕಾರಿ ಬಿ ಎಸ್ ಪ್ರಹ್ಲಾದ್‌ಗೆ ಮೊದಲು ನೋಟಿಸ್ ಜಾರಿ ಮಾಡಿದ್ದರು. ಆದರೆ, ಅಧಿಕಾರಿ ತನ್ನ ಹೇಳಿಕೆಯನ್ನು ದಾಖಲಿಸಲು ಇಲ್ಲಿಯವರೆಗೆ ಪೊಲೀಸರ ಮುಂದೆ ಹಾಜರಾಗಿಲ್ಲ” ಎಂದು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಿಬಿಎಂಪಿ ಅಧಿಕಾರಿ ಪ್ರಹ್ಲಾದ್ ಅವರು ಅಗ್ನಿ ಅವಘಡದ ತನಿಖೆಯನ್ನು ನಡೆಸುವ ಉಸ್ತುವಾರಿ ವಹಿಸಿದ್ದಾರೆ. ಅವರು ದಾಖಲೆಗಳ ಸಂಗ್ರಹ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳುತ್ತಾರೆ. ಅವರು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ” ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು-ಮೈಸೂರು ಹೆದ್ದಾರಿ: 24 ಸ್ಕೈವಾಕ್ ನಿರ್ಮಿಸಲು ನಿರ್ಧರಿಸಿದ ಹೆದ್ದಾರಿ ಪ್ರಾಧಿಕಾರ
“ಎರಡನೇ ನೋಟಿಸ್ ನಂತರವೂ ಅಧಿಕಾರಿ ವಿಚಾರಣೆಗೆ ಹಾಜರಾಗದಿದ್ದರೆ, ಅಧಿಕಾರಿಯು ಅಸಹಕಾರ ಮತ್ತು ತನಿಖೆಗೆ ಹಾಜರಾಗಲಿಲ್ಲ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗುತ್ತದೆ. ಆಗ ಅವರು ನ್ಯಾಯಾಲಯಕ್ಕೆ ಮಾತ್ರ ಉತ್ತರಿಸುತ್ತಾರೆ. ಘಟನೆಯಲ್ಲಿ ಅಧಿಕಾರಿ ಆರೋಪಿ ಸ್ಥಾನದಲ್ಲಿ ಇಲ್ಲ ಮತ್ತು ಅವರನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬ್ (ಕ್ಯೂಎಎಲ್) ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.