ಭಾನುವಾರ, ಆಗಸ್ಟ್ 27ರಂದು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಭಾರತೀಯರಿಗೆ ಮಾತ್ರವಲ್ಲದೆ ವಿಶ್ವದ ಕ್ರೀಡಾಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಪದಕ ಜಯಿಸಿದ ನಂತರ ನೀರಜ್ ನಡೆದುಕೊಂಡ ರೀತಿ ಕ್ರೀಡೆಯನ್ನು ಆರಾಧಿಸುವವರಿಗೆ ಮಾತ್ರವಲ್ಲ, ಮಾನವೀಯತೆಯನ್ನು ಗೌರವಿಸುವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.
ಭಾರತದ ಕ್ರೀಡಾಪಟುಗಳು ಒಲಿಂಪಿಕ್ಸ್ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಮ್ಮೆ ಪದಕ ಗೆದ್ದರೆ ಸೆಲಬ್ರಿಟಿಗಳಾಗಿಬಿಡುತ್ತಾರೆ. ಅಧಿಕಾರ, ಹಣ, ಕೀರ್ತಿ ಅಮಲೇರಿಬಿಡುತ್ತದೆ. ತಮ್ಮದೆ ಕ್ರೀಡಾ ಅಕಾಡೆಮಿಗಳನ್ನು ಸ್ಥಾಪಿಸಿ ಶ್ರೀಮಂತರ ಕೈಗೊಂಬೆಗಳಾಗಿ ಬಿಡುತ್ತಾರೆ. ತಾವು ಬಂದ ಹಿನ್ನೆಲೆ, ಮುಂದಿನ ಪೀಳಿಗೆಯನ್ನು ಬೆಳೆಸಬೇಕಾದ ತಳಮಟ್ಟದ ಕ್ರೀಡಾಪಟುಗಳ ಭವಿಷ್ಯದ ಬಗ್ಗೆ ಅವರು ಕಿಂಚಿತ್ತೂ ಚಿಂತಿಸುವುದಿಲ್ಲ.

ಆದರೆ ಇದೆಲ್ಲಕ್ಕೂ ಅಪವಾದವೆಂಬಂತಿರುವ ನೀರಜ್ ಚೋಪ್ರಾ ಸರಳತೆ ಹಾಗೂ ಕ್ರೀಡಾಸ್ಫೂರ್ತಿಯನ್ನು ಇನ್ನೂ ಮರೆತಿಲ್ಲ. ತಾವು ಪದಕ ಗೆದ್ದರೂ ಎರಡನೇ ಸ್ಥಾನ ಪಡೆದ ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ನೀರಜ್ ಅವರು ಭಾರತ ದೇಶದ ಧ್ವಜದ ಪಕ್ಕಕ್ಕೆ ಕರೆದುಕೊಂಡಿದ್ದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ತನ್ನ ದೇಶದ ಧ್ವಜವಿಲ್ಲದೆ ಸುಮ್ಮನೆ ನಿಂತಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ತ್ರಿವರ್ಣ ಧ್ವಜದಡಿ ನಿಲ್ಲುವಂತೆ ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರು ಕೋರಿದರು. ಈ ಮನವಿಗೆ ಸ್ಪಂದಿಸಿದ ಅರ್ಷದ್ ನೀರಜ್ ಪಕ್ಕದಲ್ಲಿ ಬಂದು ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ದ್ವೇಷದ ಗಡಿಯನ್ನು ಮೀರಿ ನಿಂತು ಮಾಡಿದ ನೀರಜ್ ಅವರ ಈ ನಡೆಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ. ಸೋಲು ಗೆಲುವನ್ನು ಮರೆತು ಒಬ್ಬರನೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


“ನೀರಜ್ ಮತ್ತು ನಾನು ಆರೋಗ್ಯಕರ ಸ್ಪರ್ಧೆ ಹೊಂದಿದ್ದೇವೆ. ನಾವು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತೇವೆ. ಪಾಕಿಸ್ತಾನ-ಭಾರತದ ಕ್ರೀಡಾ ಪೈಪೋಟಿ ಕೆಟ್ಟ ರೀತಿಯಲ್ಲಿ ಇಲ್ಲ. ಸಾಮಾನ್ಯವಾಗಿ ಯುರೋಪಿಯನ್ ಪ್ರಾಬಲ್ಯವಿರುವ ಸ್ಪರ್ಧೆಯಲ್ಲಿ ನಾವಿಬ್ಬರೂ ಮುಂಚೂಣಿಗೆ ಬಂದಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಸಹೋದರ ನೀರಜ್ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನೀರಜ್ ಸ್ವರ್ಣ ಗೆದ್ದಿದ್ದು ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಎರಡು ಸ್ಥಾನ ಪಡೆದುಕೊಂಡಿವೆ. ನೀರಜ್ ಮತ್ತು ನಾನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಎರಡು ಸ್ಥಾನದಲ್ಲೇ ಉಳಿಯಬೇಕು ಎಂದು ಬಯಸುತ್ತೇನೆ” ಎಂದು ಪಾಕ್ ಅರ್ಷದ್ ಹೇಳಿದರು.
ಅರ್ಷದ್ ನದೀಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನೀರಜ್ ಚೋಪ್ರಾ “ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದಿದ್ದರೂ ನಾನು ಖುಷಿ ಪಡುತ್ತಿದ್ದೆ. ಈ ಹಿಂದೆ ಐರೋಪ್ಯ ರಾಷ್ಟ್ರಗಳ ಪ್ರಾಬಲ್ಯವೇ ಹೆಚ್ಚಿತ್ತು. ಈಗ ಏಷ್ಯಾದ ದೇಶಗಳು ಮುನ್ನೆಲೆಗೆ ಬರುತ್ತಿವೆ. ಅರ್ಷದ್ ಕೂಡ ಅದ್ಭುತ ಸಾಧನೆ ಮಾಡಿದ್ದಾರೆ. ಅವರಿಗೂ ನನ್ನ ಅಭಿನಂದನೆಗಳು. ಯಾವುದೇ ಕ್ರೀಡೆಯಾದರೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪೈಪೋಟಿ ಅತೀವ ಸಂತಸ ತರುತ್ತದೆ. ನಾವಿಬ್ಬರೂ ತುಂಬಾ ಮಾತನಾಡಿದ್ದೇವೆ. ಉಭಯ ದೇಶಗಳು ಬಗ್ಗೆಯೂ ಚರ್ಚಿಸಿದ್ದೇವೆ” ಎನ್ನುವುದರೊಂದಿಗೆ ತಮ್ಮಿಬ್ಬರ ಸ್ನೇಹ ದ್ವೇಷದ ಗಡಿಗಳನ್ನು ಮೀರಿದ್ದು ಎಂದಿದ್ದಾರೆ.

ಪತ್ರಕರ್ತನಿಗೆ ಪ್ರೀತಿಯ ಉತ್ತರ ನೀಡಿದ ನೀರಜ್ ತಾಯಿ
ಪಾಕಿಸ್ತಾನದ ಅಥ್ಲೀಟ್ ಒಬ್ಬರನ್ನು ನಿಮ್ಮ ಮಗ ಸೋಲಿಸಿರುವುದನ್ನು ನೋಡಿ ಏನು ಅನಿಸಿತು ಎಂದು ಪತ್ರಕರ್ತರೊಬ್ಬರು ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ಅವರನ್ನು ಕೇಳಿದ್ದಾರೆ. ಇದಕ್ಕೆ ಪ್ರೀತಿಯಿಂದ ಉತ್ತರಿಸಿದ ಸರೋಜ್ ಅವರು, “ಕ್ರೀಡಾಪಟು ಯಾವ ದೇಶದಿಂದ ಬಂದವರು ಎಂಬುದು ಮುಖ್ಯವಲ್ಲ. ಇದು ಜನರ ಹೃದಯ ಗೆದ್ದಿದೆ. ನೋಡಿ, ಎಲ್ಲರೂ ಆಟವಾಡಲು ಬಂದಿರುತ್ತಾರೆ. ಅಲ್ಲಿ ಯಾರಾದರೂ ಒಬ್ಬರು ಮಾತ್ರ ಗೆಲ್ಲುತ್ತಾರೆ. ಹೀಗಾಗಿ ಅವರು ಪಾಕಿಸ್ತಾನದವರೋ ಅಥವಾ ಹರಿಯಾಣದವರೋ ಎಂಬುದು ಇಲ್ಲಿ ಪ್ರಶ್ನೆಯೇ ಅಲ್ಲ. ಇದು ಸಂತೋಷದ ವಿಷಯ. ಒಂದು ವೇಳೆ ಅಲ್ಲಿ ಪಾಕಿಸ್ತಾನದ ಆಟಗಾರ ಗೆದ್ದಿದ್ದರೂ ಸಹ ನನಗೆ ತುಂಬಾ ಸಂತೋಷವಾಗುತ್ತಿತ್ತು” ಎಂದು ತಮಗೆ ಕ್ರೀಡಾ ಮನೋಭಾವ ಮಾತ್ರವೇ ಮುಖ್ಯ ಎಂದು ಹೇಳಿದರು.
ದಿನ ಬೆಳಗಾದರೆ ಪಾಕಿಸ್ತಾನ, ಭಾರತ ಅಂತ ದ್ವೇಷಾಸೂಯೆಗಳನ್ನು ಕಾರುವ ದೊಡ್ಡ ಸಂಖ್ಯೆಯ ಕೋಮುವಾದಿಗಳು ಎರಡೂ ದೇಶಗಳಲ್ಲಿದ್ದಾರೆ. ರಾಜಕಾರಣಿಗಳಿಂದ ದೇಶ, ಧರ್ಮಗಳ ನಡುವೆ ಬೆಸೆದು ಪ್ರೀತಿ, ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಸಾಧ್ಯವಿಲ್ಲ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಚಳವಳಿಗಳು ಅಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಗಳಿಂದಲೇ ಇದು ಸಾಧ್ಯ. ಇದನ್ನು ನೀರಜ್ ಹಾಗೂ ಅರ್ಷದ್ ಸಾಬೀತುಪಡಿಸಿದ್ದಾರೆ.

ಸಾಮಾನ್ಯ ರೈತನ ಮಗ, ಸೆಲೆಬ್ರಿಟಿಯ ವರ್ತನೆಯಿಲ್ಲ
ನೀರಜ್ ಡಿಸೆಂಬರ್ 24, 1997 ರಂದು ಹರಿಯಾಣದ ಖಂಡ್ರಾ ಪಾಣಿಪತ್‌ನಲ್ಲಿ ಅವಿಭಕ್ತ ರೈತ ಕುಟುಂಬದಲ್ಲಿ ಜನಿಸಿದರು. ತಂದೆ ಸತೀಶ್ ಚೋಪ್ರಾ ಕೃಷಿ ಕಾಯಕ ಮಾಡಿಕೊಂಡಿದ್ದಾರೆ. ತಾಯಿ ಸರೋಜ್ ದೇವಿ ಗೃಹಿಣಿ. ಅವರ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ. ಚೋಪ್ರಾ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, ಅವರ ತಂದೆಯ ಎಲ್ಲ ಸಹೋದರರೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದಾರೆ. ನೀರಜ್, ಬಾಲ್ಯದಿಂದಲೂ ಕ್ರೀಡೆಯಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಆದರೆ ಸ್ಥೂಲಕಾಯದ ಮಗುವಾಗಿದ್ದ ನೀರಜ್ ಅವರನ್ನು ತೂಕ ಕಡಿಮೆ ಮಾಡುವ ಸಲುವಾಗಿ ಕ್ರೀಡಾ ಅಕಾಡೆಮಿಗೆ ಸೇರಿಸಲಾಯಿತು. ಇಲ್ಲಿಂದ ನೀರಜ್ ಜೀವನ ಬದಲಾಯಿತು.
ನೀರಜ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಹರಿಯಾಣದ ಬಿವಿಎನ್ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದರು. ತನ್ನ ಪದವಿ ವ್ಯಾಸಂಗವನ್ನು ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಆರಂಭಿಸಿದ ನೀರಜ್, ಜಾವೆಲಿನ್ ತರಬೇತಿಯಿಂದಾಗಿ ಕಾಲೇಜ್ ಬಿಡಬೇಕಾಯಿತು. ಬಳಿಕ 2021 ರಲ್ಲಿ, ತಮ್ಮ ಬಿಎ ಪದವಿ ಮುಂದುವರೆಸಲು ಲವ್ಲಿ ಪ್ರೊಫೆಷನಲ್ ವಿವಿಯಲ್ಲಿ ಮತ್ತೆ ಪ್ರವೇಶ ಪಡೆದರು.

ಕ್ರೀಡಾ ವಲಯದಲ್ಲಿ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರು ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿ ನೇಮಕಗೊಂಡರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ, ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್‌ಎಂ) ನೀಡಲಾಯಿತು. ಬಳಿಕ ನೀರಜ್ ಚೋಪ್ರಾ ಅವರು ಸೇನೆಯ ಅತ್ಯಂತ ಹಳೆಯ ರೈಫಲ್ ರೆಜಿಮೆಂಟ್ಸ್ ಮತ್ತು ಅದರ ಪೋಷಕ ಘಟಕವಾದ ರಜಪೂತ್ ರೈಫಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನೀರಜ್ಗೆ ಬಡ್ತಿ ನೀಡಲಾಯಿತು. ಪ್ರಸ್ತುತ ನೀರಜ್ ಸುಬೇದಾರ್ ಶ್ರೇಣಿಯನ್ನು ಹೊಂದಿದ್ದಾರೆ.
ವರ್ಷಕ್ಕೆ ಹತ್ತಾರು ಕೋಟಿ ಸಂಪಾದನೆ ಮಾಡುವ ನೀರಜ್ ಚೋಪ್ರಾ ಹಣ, ಐಶ್ವರ್ಯಕ್ಕಾಗಿ ಮೈಮರೆಯುವ ಇತರ ಕ್ರೀಡಾಪಟುಗಳ ರೀತಿ ಸೆಲಬ್ರಿಟಿಯಯಂತೆ ವರ್ತಿಸುವುದಿಲ್ಲ. ಸಾಮಾನ್ಯರಂತೆ ಎಲ್ಲರೊಂದಿಗೂ ಬೆರೆಯಲು ಇಷ್ಟಪಡುತ್ತಾರೆ.
25ನೇ ವಯಸ್ಸಿಗೆ ಎಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ವರ್ಣ
22ನೇ ವಯಸ್ಸಿಯಲ್ಲಿಯೇ ಜಪಾನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ನೀರಜ್, ಈಗ 25ನೇ ವಯಸ್ಸಿನಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕಿದು ಮೂರನೇ ಪದಕವಾದರೂ ಚಿನ್ನದ ಪದಕ ಜಯಿಸಿರುವುದು ಮೊದಲ ಬಾರಿ.
1983ರಿಂದಲೂ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತಕ್ಕಿದು 3ನೇ ಪದಕ. 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ತಂದುಕೊಟ್ಟಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು.

ನೀರಜ್ ಅವರ ಕ್ರೀಡಾ ಸಾಧನೆ ಇಷ್ಟಕ್ಕೆ ನಿಲ್ಲುವುದಿಲ್ಲ. ಎಲ್ಲ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ನೀರಜ್ ಪಾತ್ರರಾಗಿದ್ದಾರೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟ, ಡೈಮಂಡ್ ಲೀಗ್, ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀರಜ್ ಇಲ್ಲಿಯವರೆಗೂ ಒಟ್ಟು 10 ಪದಕಗಳನ್ನು ಜಯಗಳಿಸಿದ್ದಾರೆ.
ವಿಶ್ವ ಅಥ್ಲೆಟಿಕ್ಸ್, ಒಲಿಂಪಿಕ್ಸ್, ಕಾಂಟಿನೆಂಟಲ್(ಏಷ್ಯಾ) ಮೂರೂ ಕೂಟಗಳಲ್ಲಿ ಚಿನ್ನ ಗೆದ್ದ ವಿಶ್ವದ ಅತಿಕಿರಿಯ ಎನ್ನುವ ದಾಖಲೆಯನ್ನು 25 ವರ್ಷದ ನೀರಜ್ ಚೋಪ್ರಾ ನಿರ್ಮಿಸಿದ್ದಾರೆ. ಒಟ್ಟಾರೆ ಈ ಸಾಧನೆ ಮಾಡಿದ ಮೂರನೇ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಚೆಕ್ ಗಣರಾಜ್ಯದ ಯಾನ್ ಜೆಲೆನ್ಜಿ, ಫಿನ್‌ಲ್ಯಾಂಡಿನ ಆ್ಯಂಡೆರ್ಸ್ ಥಾರ್ಕಿಲ್ಡ್ಸೆನ್ ಈ ಸಾಧನೆ ಮಾಡಿದ್ದರು. ಜೆಲೆನ್ಜಿ ಎಲ್ಲಾ ಮೂರು ಪದಕ ಗೆದ್ದಾಗ ಅವರಿಗೆ 28 ವರ್ಷವಾಗಿತ್ತು. ಆ್ಯಂಡೆರ್ಸ್ 27ನೇ ವಯಸ್ಸಿನಲ್ಲಿ ಈ ಸಾಧನೆಗೈದಿದ್ದರು.
ಈ ಸುದ್ದಿ ಓದಿದ್ದೀರಾ? ಮ್ಯಾಗ್ನಸ್ ಕಾರ್ಲ್‌ಸೆನ್ ಚೆಸ್ ಚಾಂಪಿಯನ್: ರನ್ನರ್ ಅಪ್ ಸ್ಥಾನದೊಂದಿಗೆ ಕ್ರೀಡಾಭಿಮಾನಿಗಳ ಮನಗೆದ್ದ ಪ್ರಜ್ಞಾನಂದ
‘ಸೋತರೂ ಪ್ರೋತ್ಸಾಹ ಹೀಗೆ ಇರಲಿ’
“ನಾನು ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್ ಎಂಬ ಮಾತನ್ನು ಒಪ್ಪಲಾರೆ. ನನಗೆ ಕೇವಲ ವಿಶ್ವ ಚಾಂಪಿಯನ್ ಚಿನ್ನ ಅಷ್ಟೇ ಗೆಲ್ಲಲು ಬಾಕಿ ಉಳಿದಿದೆ ಎಂದು ಹಲವರು ಹೇಳುತ್ತಿದ್ದರು. ಅದನ್ನು ನಾನು ಜಯಿಸಿದ್ದಾಯಿತು. ಆದರೆ ಸಾಧಿಸಲು ನನ್ನ ಎದುರು ಇನ್ನೂ ಹಲವು ಗುರಿಗಳಿವೆ. ಅದರ ಕಡೆ ನನ್ನ ಗಮನವಿರಲಿದೆ. ನಾನು ಇದನ್ನು ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿಕೊಳ್ಳಲು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಸೋತರೂ ನೀವು ನನ್ನ ಜೊತೆಗೆ ಇದ್ದು ಪ್ರೋತ್ಸಾಹ ನೀಡಬೇಕು” ಎನ್ನುತ್ತಾರೆ ನೀರಜ್ ಚೋಪ್ರಾ.

ಶ್ರೇಷ್ಠ ಅಥ್ಲೀಟ್ ಎನಿಸಿಕೊಳ್ಳಬೇಕಾದರೆ, ಜಾನ್ ಜೆಲೆನ್ಸ್ಕಿ ರೀತಿ ಇರಬೇಕು ಎಂದು ಜೆಕೊಸ್ಲಾವಾಕಿಯಾದ ವಿಶ್ವ ದಾಖಲೆ ವೀರನ ಹೆಸರು ಪ್ರಸ್ತಾಪಿಸುತ್ತಾರೆ. ಜೆಲೆನ್ಸ್ಕಿ, ಜಾವೆಲಿನ್‌ನಲ್ಲಿ ದಂತಕತೆಯಾಗಿದ್ದು, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 98.48ಮೀ ಎಸೆದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ(ನೀರಜ್ ದಾಖಲೆ 88.17ಮೀ). ಮೂರು ಬಾರಿ ಒಲಿಂಪಿಕ್ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಕೂಡ ಜಾನ್ ಜೆಲೆನ್ಸ್ಕಿ ಹೆಸರಿನಲ್ಲಿದೆ. ಚೋಪ್ರಾ ಅವರಿಗೆ ಜೆಲೆನ್ಸ್ಕಿ ಮಾದರಿಯಾಗಿದ್ದಾರೆ.
ಕನ್ನಡಿಗ ಕೋಚ್
ಅಂತಾರಾಷ್ಟ್ರೀಯ ಕ್ರೀಡಾರಂಗದಲ್ಲಿ ಅಗ್ರಗಣ್ಯ ಸಾಧನೆ ಮಾಡಿರುವ ನೀರಜ್ ಚೋಪ್ರಾ ಸಾಧನೆಯಲ್ಲಿ ಕನ್ನಡಿಗರೊಬ್ಬರ ಪಾಲಿದೆ ಎನ್ನುವುದು ಖುಷಿಯ ವಿಚಾರ. ಅವರ ಐವರು ತರಬೇತುದಾರರಲ್ಲಿ ಉತ್ತರ ಕನ್ನಡದ ಶಿರಸಿ ಮೂಲದ ಕಾಶಿನಾಥ್ ನಾಯ್ಕ್ ಕೂಡ ಒಬ್ಬರು. ಕಾಶಿನಾಥ್ ಅವರು ನೀರಜ್ ಅವರಿಗೆ ಒಟ್ಟು ಆರು ವರ್ಷಗಳ ಕಾಲ ಕೋಚಿಂಗ್ ನೀಡಿದ್ದಾರೆ. ಇವರ ತರಬೇತಿ ಅವಧಿಯಲ್ಲಿ 2016ಲ್ಲಿ ಪೋಲ್ಯಾಂಡ್‌ನಲ್ಲಿ ನಡೆದಿದ್ದ ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬಂಗಾರದ ಪದಕ ಗೆದ್ದಿದ್ದರು. ಸದ್ಯ ಕಾಶಿನಾಥ್ ಅವರು ಮಹಾರಾಷ್ಟ್ರ ಪುಣೆಯಲ್ಲಿ ಇಂಡಿಯನ್ ಆರ್ಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.
ಯುರೋಪ್ ದೇಶಗಳ ಬಲಿಷ್ಠ ಅಥ್ಲೀಟ್‌ಗಳ ಪೈಪೋಟಿಯನ್ನು ಮೀರಿ ನಿಂತು ನೀರಜ್ ಅವರು ಮಾಡಿದ ಈ ಸಾಧನೆ ಮಹತ್ವದ್ದು ಎಂದು ಹೇಳಬಹುದು. ಹಲವು ದಶಕಗಳಿಂದ ಒಲಿಂಪಿಕ್ಸ್ ಮತ್ತು ವಿಶ್ವ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್‌ಗಳಿಗೆ ಪದಕ ಒಲಿದಿರುವುದು ತೀರ ಕಡಿಮೆ. ಆದರೆ ಈಗ ನೀರಜ್ ತಮ್ಮ ಸಾಧನೆಗಳಿಂದ ಎಲ್ಲವೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಸಾಧನೆಗೆ ಸತತ ಪರಿಶ್ರಮವೇ ಕಾರಣ. ಎರಡು ವರ್ಷಗಳ ಹಿಂದೆ ಒಲಿಂಪಿಕ್ ಪದಕ ವಿಜೇತರಾದ ಬಳಿಕ ಲಭಿಸಿದ ಕೀರ್ತಿ, ಹಣ ಮತ್ತು ಪ್ರಚಾರಕ್ಕೆ ಅವರು ಎಂದು ಮೈಮರೆಯಲಿಲ್ಲ. ನಿರಂತರ ಸಾಧನೆಯ ತುಡಿತ ಅವರಲ್ಲಿತ್ತು. ಪದಕ ಗೆದ್ದೊಡನೆ ಸೆಲಬ್ರಿಟಿಗಳಾಗುವ ಎಲ್ಲ ಕ್ರೀಡಾಪಟುಗಳು ನೀರಜ್ ಚೋಪ್ರಾ ಅವರಿಂದ ಕಲಿಯಬೇಕಾದವು ಬಹಳಷ್ಟಿದೆ.
