ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 225 ವಾರ್ಡ್ಗಳನ್ನು ರಚಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿತ್ತು. ಇದೀಗ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಹಾಗೂ ಸಲಹೆಗಳು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿವೆ.
ಬಿಬಿಎಂಪಿಯ 243 ವಾರ್ಡ್ಗಳಿಂದ 225ಕ್ಕೆ ವಾರ್ಡ್ಗಳ ಸಂಖ್ಯೆಯನ್ನು ಸರ್ಕಾರ ಇಳಿಕೆ ಮಾಡಿತ್ತು. ಆ.18 ರಂದು ವಾರ್ಡ್ಗಳ ಗಡಿ ಗುರುತು ಮಾಡಿ ಅಧಿಸೂಚನೆ ಹೊರಡಿಸಿತ್ತು. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಸೆ.1 ರವರೆಗೆ ಅವಕಾಶ ನೀಡಲಾಗಿತ್ತು.
ಅಂಚೆ ಮೂಲಕ ಮಾತ್ರವೇ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಸರ್ಕಾರ ನಿಯಮ ವಿಧಿಸಿತ್ತು. ಇದಕ್ಕೆ ಹಲವರು ಆನ್ಲೈನ್ ಮುಖಾಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದರು.
ಇದೀಗ ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಹಾಗೂ ಸಲಹೆಗಳು ಬಂದಿದ್ದು, ಅದರಲ್ಲಿ ಗಡಿ, ವಾರ್ಡ್ಗಳ ಹೆಸರು, ಪ್ರದೇಶದ ಹೆಸರು ನಮೂದಾಗದಿರುವುದು ಪ್ರಮುಖ ಆಕ್ಷೇಪಣೆಯಾಗಿದೆ. ಗಡಿಗಳನ್ನು ಒಂದು ವಿಧಾನಸಭಾ ಕ್ಷೇತ್ರದೊಳಗೆ ಸೇರಿಸುವಂತೆ ಕೇಳಲಾಗಿದೆ.
“ಶುಕ್ರವಾರ ಸಾಯಂಕಾಲದವರೆಗೂ ಅಂಚೆ ಮೂಲಕ ಬಂದ ಆಕ್ಷೇಪಣೆಗಳನ್ನೂ ಸ್ವೀಕರಿಸಲಾಗಿದೆ. ಎಲ್ಲವನ್ನೂ ಒಟ್ಟುಗೂಡಿಸಿ, ವಿಷಯವಾರು ವರ್ಗಾವಣೆ ಮಾಡಲಾಗುತ್ತದೆ. ಎಲ್ಲ ಆಕ್ಷೇಪಣೆಗಳನ್ನೂ ಪರಿಶೀಲನೆ ಮಾಡಿ ಇನ್ನೊಂದು ವಾರದಲ್ಲಿ ವಾರ್ಡ್ಗಳ ಅಂತಿಮ ಅಧಿಸೂಚನೆ ಹೊರಬೀಳಲಿದೆ” ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳಿದರು.
ಸರ್ಕಾರ ಈ ಆಕ್ಷೇಪಣೆಗೆ ನೀಡಿದ ಅವಧಿ ವಿಸ್ತರಿಸುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಏಕೆಂದರೆ, ಹೈಕೋರ್ಟ್ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದ್ದರಿಂದ ಸೆಪ್ಟೆಂಬರ್ 18 ರೊಳಗೆ ವಾರ್ಡ್ ಗಡಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಡಿಸೆಂಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
ಈ ಸುದ್ದಿ ಓದಿದ್ದೀರಾ? ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ: ಭಾಗವತ್ ಟೀಕಿಸಿದ ಸ್ವಾಮಿ ಪ್ರಸಾದ್ ಮೌರ್ಯ
ಬಿಬಿಎಂಪಿ ವೆಬ್ಸೈಟ್ನಲ್ಲಿ ಅಸ್ತಿತ್ವದಲ್ಲಿರುವ ಮತ್ತು ವಿಂಗಡಣೆಯಾದ ವಾರ್ಡ್, ವಾರ್ಡ್ ವಿಸ್ತೀರ್ಣ, ಜನಸಂಖ್ಯೆ, ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರದ ವಿವರಗಳನ್ನು ನೀಡುವ ನಕ್ಷೆಯನ್ನು ಅಪ್ಲೋಡ್ ಮಾಡಿದೆ.
ಈ ಹಿಂದಿನ ಬಿಜೆಪಿ ಸರ್ಕಾರ 198 ಇದ್ದ ವಾರ್ಡ್ ಸಂಖ್ಯೆಯನ್ನು 243ಕ್ಕೆ ಏರಿಕೆ ಮಾಡಿತ್ತು. ಆಗ ವಾರ್ಡ್ ವಿಂಗಡಣೆಯಲ್ಲಿನ ಲೋಪದೋಷಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ಸರ್ಕಾರವು ಹೈಕೋರ್ಟ್ನಲ್ಲಿ ಕಾಲಾವಕಾಶ ಕೋರಿತ್ತು.