- ಮತಗಟ್ಟೆ ಅಧಿಕಾರಿಗಳಿಗೆ ಜೂ. 1-ಜು. 20ರವರೆಗೆ ತರಬೇತಿ
- ಅಕ್ಟೋಬರ್ 17ರಂದು ಮತದಾರರ ಕರಡು ಪಟ್ಟಿ ಪ್ರಕಟ
ಚುನಾವಣಾ ಆಯೋಗದ ನಿರ್ದೇಶನದಂತೆ, ಅಧಿಕಾರಿಗಳಿಗೆ ತರಬೇತಿ ನೀಡುವುದರಿಂದ ಹಿಡಿದು ಮತದಾರರ ಪಟ್ಟಿ ಪರಿಷ್ಕರಣೆಯವರೆಗೆ ಹಲವಾರು ಚಟುವಟಿಕೆಗಳನ್ನು ಯೋಜಿಸುವ ಮೂಲಕ 2024ರ ಲೋಕಸಭೆ ಚುನಾವಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ಪ್ರಾರಂಭಿಸಿದೆ.
ಈ ಅವಧಿಯಲ್ಲಿ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5 ರಂದು ಪ್ರಕಟಿಸಲಾಗುವುದು ಎಂದು ಪಾಲಿಕೆ ಹೇಳಿದೆ.
ಚುನಾವಣೆ ಅಧಿಕಾರಿಗಳು, ಸಹಾಯಕ ಚುನಾವಣೆ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೆ ಜೂನ್ 1ರಿಂದ ಜುಲೈ 20ರವರೆಗೆ ತರಬೇತಿ ನೀಡಲಾಗುತ್ತದೆ.
ಮತಗಟ್ಟೆ ಅಧಿಕಾರಿಗಳು ಜುಲೈ 21 ರಿಂದ ಆಗಸ್ಟ್ 21 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಪರಿಶೀಲನೆ ಸಮೀಕ್ಷೆಯನ್ನು ಕೈಗೊಳ್ಳುತ್ತಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಆಯ್ಕೆಯ ಚಟುವಟಿಕೆಗಳು ಆ.22 ರಿಂದ ಸೆ. 29ರವರೆಗೆ ನಡೆಯಲಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ? ಇಲ್ಲಿದೆ ನೋಡಿ!
ಮತದಾರರ ಪಟ್ಟಿಯ ಕರಡು ಪ್ರತಿ ಸಿದ್ಧತೆ ಸೆ.30 ರಿಂದ ಅ.16 ರವರೆಗೆ ನಡೆಯಲಿದೆ. ಅ. 17ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆ ಸಲ್ಲಿಸಲು ಅ.17 ರಿಂದ ನ.30ರವರೆಗೆ ಅವಕಾಶವಿದೆ. ಡಿಸೆಂಬರ್ 26ರೊಳಗೆ ಬಂದ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಶನಿವಾರ ಮತ್ತು ಭಾನುವಾರದಂದು ಎರಡು ದಿನ ವಿಶೇಷ ಅಭಿಯಾನ ನಡೆಸಲಾಗುತ್ತದೆ. 2024ರ ಜ.1ರಂದು ಮತದಾರರ ಅಂತಿಮ ಪಟ್ಟಿಯನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ. ಜ.5ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.