- ಸಾಲದ ಸುಳಿಗೆ ಸಿಲುಕುತ್ತಿರುವ ಗುತ್ತಿಗೆದಾರರು
- ಬಿಲ್ ಪಾವತಿ ಮಾಡದಿದ್ದರೆ ಉಗ್ರ ಹೋರಾಟ
“ಪ್ರಸಕ್ತ ಸಾಲಿನಲ್ಲಿ ತೆರಿಗೆ ಹಣ ಸುಮಾರು ₹2 ಸಾವಿರ ಕೋಟಿ ಲಭ್ಯವಿದ್ದರೂ ಸಹ ಬಾಕಿ ಬಿಲ್ ಪಾವತಿ ಮಾಡಲು ಬಿಬಿಎಂಪಿ ಮೀನಾಮೇಷ ಮಾಡುತ್ತಿದೆ. ಇದರ ಬಗ್ಗೆ ಗುತ್ತಿಗೆದಾರರಿಗೆ ಸ್ಪಷ್ಟನೆ ನೀಡಬೇಕು” ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಆರೋಪಿಸಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಸಕ್ತ ಸಾಲಿನಲ್ಲಿಯೇ (2023-24) ಬಿಬಿಎಂಪಿಗೆ ಸುಮಾರು 2 ಸಾವಿರ ಕೋಟಿ ತೆರಿಗೆ ಹಣ ಬಂದಿದೆ. ಗುತ್ತಿಗೆದಾರರು ಕಳೆದ 26 ತಿಂಗಳಿನಿಂದ ನಿರ್ವಹಿಸಿದ ಕಾಮಗಾರಿಗಳಿಗೆ ಇನ್ನೂ ಹಣ ಪಾವತಿ ಮಾಡಿಲ್ಲ. ತೆರಿಗೆ ಹಣ ಇದ್ದರೂ ಯಾಕೆ ಹಣ ಬಿಡುಗಡೆ ಮಾಡಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದರು.
“ಪಾಲಿಕೆಗೆ ರಾಜ್ಯ ಸರ್ಕಾರದ ಅನುದಾನ ₹675 ಕೋಟಿ ಸಂದಾಯವಾಗಿ ಮೂರು ತಿಂಗಳು ಕಳೆದಿವೆ. ನಡೆದ ಕಾಮಗಾರಿಗಳಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಇದರ ಹಿಂದೆ ಏನೋ ಷಡ್ಯಂತ್ರವಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ಸಾಲದ ಸುಳಿಗೆ ಸಿಲುಕುವಂತಾಗಿದೆ. ಹಾಗಾಗಿ, ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಬರೆದಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಎಲ್ಲ ವಿಧದ ಔಷಧಿ ಎಲ್ಲರಿಗೂ ಉಚಿತವಾಗಿ ಸಿಗಬೇಕು: ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ
“ಗುತ್ತಿಗೆದಾರರಿಗೆ ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು. ಹಣಕಾಸು ಮುಗ್ಗಟ್ಟಿನಿಂದ ಗುತ್ತಿಗೆದಾರರಿಗೆ ಅನಾಹುತ ಸಂಭವಿಸಿದರೆ, ಇದರ ಜವಾಬ್ದಾರಿಯನ್ನು ಮುಖ್ಯ ಆಯುಕ್ತರು ಹೊಣೆ ಹೊರಬೇಕಾಗುತ್ತದೆ” ಎಂದು ತಿಳಿಸಿದರು.