ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದ ಸಾವಿನ ಪ್ರಕರಣಗಳ ಸಂಖ್ಯೆ ಜುಲೈ ತಿಂಗಳಿನಲ್ಲಿ ಇಳಿಮುಖವಾಗಿದೆ. ಮೇ ತಿಂಗಳಲ್ಲಿ 29 ಹಾಗೂ ಜೂನ್ ತಿಂಗಳಲ್ಲಿ 28 ಮಂದಿ ಸಾವನ್ನಪ್ಪಿದ್ದರು. ಇದೀಗ ಜು. 23ರ ವೇಳೆಗೆ ಸಾವಿನ ಸಂಖ್ಯೆ 8ಕ್ಕೆ ಇಳಿಕೆ ಕಂಡಿದೆ” ಎಂದು ಹೇಳಿದ್ದಾರೆ.
“ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆಯುತ್ತಿರುವ ಹೆಚ್ಚಿನ ಅಪಘಾತಗಳಿಗೆ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಗೊತ್ತಾಗಿದೆ. ಆ ಬಳಿಕ ಸಂಚಾರದಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಯಿತು. ಈ ಸಾವಿನ ಸಂಖ್ಯೆ ಒಂದಂಕಿಗೆ ಇಳಿಯಲು ಕಾರಣರಾದ ನಮ್ಮ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ” ಎಂದು ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತ ಸಂಖ್ಯೆಗಳನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ, ಎಐ ಕ್ಯಾಮೆರಾ ಅಳವಡಿಕೆ, ವಾಹನಗಳ ವೇಗಕ್ಕೆ ಮಿತಿ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.