- ಶುಲ್ಕ ವಿಧಿಸಬಹುದಾದ 70,000 ಚದರ ಅಡಿ ಜಾಗವನ್ನು ನೀಡುತ್ತಿರುವ ನಿಗಮ
- ಕಳೆದ 15-20 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ 50,000 ಏರಿಕೆ ಕಂಡಿದೆ
50 ಮೆಟ್ರೋ ನಿಲ್ದಾಣಗಳಲ್ಲಿ ಒಳಾಂಗಣ ಜಾಹೀರಾತಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಟೆಂಡರ್ ಆಹ್ವಾನಿಸಿದೆ.
ಜಾಹೀರಾತುಗಳನ್ನು ಪ್ರದರ್ಶಿಸಲು ಶುಲ್ಕ ವಿಧಿಸಬಹುದಾದ ಸುಮಾರು 70,000 ಚದರ ಅಡಿ ಜಾಗವನ್ನು ನೀಡುತ್ತಿದೆ. ಆದರೆ, ಟೆಂಡರ್ ದಾಖಲೆ ಪ್ರಕಾರ, ತನ್ನ ಪ್ರಚಾರಕ್ಕಾಗಿ ಒಟ್ಟು ಡಿಜಿಟಲ್ ಜಾಹೀರಾತು ಪ್ರದೇಶದ 5% ಅನ್ನು ಮಾತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ನಿಲ್ದಾಣದ ಜಾಗಗಳ ಸಾಮರ್ಥ್ಯವನ್ನು ನಗದೀಕರಿಸಲು ಜಾಹೀರಾತುದಾರರು ಬೇಡಿಕೆ ಇಟ್ಟ ಬಳಿಕ ಹೊಸ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
“ಆಯ್ದ ನಿಲ್ದಾಣಗಳ ಒಳಭಾಗದಲ್ಲಿ ಮೆಟ್ಟಿಲುಗಳು, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫ್ರಿಸ್ಕಿಂಗ್ ಪ್ಯಾನೆಲ್‌ಗಳು ಇತ್ಯಾದಿಗಳನ್ನು ಜಾಹೀರಾತು ಪ್ರಕಟಿಸಲು ನೀಡಬಹುದು. ಗುತ್ತಿಗೆ ಪಡೆಯುವವರು ಬಿಎಂಆರ್‌ಸಿಎಲ್‌ನ ಅನುಮೋದನೆಯೊಂದಿಗೆ ಜಾಹೀರಾತು ಜಾಗವನ್ನು ಗುರುತಿಸಲು ಅವಕಾಶ ನೀಡಲಾಗುವುದು. ಒಳಾಂಗಣ ಜಾಹೀರಾತಿನ ಮೂಲಕ ನಿಗಮವು ₹30 ರಿಂದ 35 ಕೋಟಿ ಗಳಿಸುವ ನಿರೀಕ್ಷೆಯಿದೆ” ಎಂದು ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ನುಮುಂದೆ ಊಟದ ಜೊತೆಗೆ ಮೊಟ್ಟೆ ನೀಡಲು ಚಿಂತನೆ
“ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರತಿ ದಿನ 6.3 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ಗರಿಷ್ಠ ಮಟ್ಟದಲ್ಲಿದೆ. ಇದು ಕೋವಿಡ್ ಪೂರ್ವದ ಮಟ್ಟವನ್ನು ದಾಟಿದೆ. ಕಳೆದ 15-20 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ 50,000 ಏರಿಕೆ ಕಂಡಿದೆ. ಇದೇ ರೀತಿ ಮುಂದುವರಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ನಮ್ಮ ಸಂಸ್ಥೆ ಲಾಭ ಗಳಿಸಬಹುದು” ಎಂದರು.
“2022-23ರ ಹಣಕಾಸು ಗಳಿಕೆ ಮತ್ತು ವೆಚ್ಚಗಳ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಸಂಸ್ಥೆಯು ಕಾರ್ಯಾಚರಣೆಯ ಲಾಭವನ್ನು ಗಳಿಸಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ತಿಳಿಸಲಾಯಿತು. ಇದು ನಮಗೆ ಬಹಳ ಒಳ್ಳೆಯ ಸುದ್ದಿ. ಸ್ವಲ್ಪ ಸಮಯದ ನಂತರ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗುವುದು” ಎಂದು ಪರ್ವೇಜ್ ಹೇಳಿದರು.