“ಬೆಂಗಳೂರಿನಲ್ಲಿ ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ನಾವೆಲ್ಲರೂ ಸೇರಿ ಹೊಸ ಮಾದರಿಯ ಯೋಜನೆ ರೂಪಿಸಬೇಕಿದೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯ ಭಾಗವಾಗಿ ‘ಶೈಕ್ಷಣಿಕ ಬೆಂಗಳೂರು’ ವಿಷಯ ಕುರಿತು ಟೌನ್ಹಾಲ್ನಲ್ಲಿ ಶುಕ್ರವಾರ ವಿಚಾರ ಸಂಕಿರಣ ನಡೆಯಿತು. ಈ ವೇಳೆ ಮಾತನಾಡಿದ ಅವರು, “ನಗರದಲ್ಲಿ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲರಿಗೂ ಶಿಕ್ಷಣ ದೊರಕುವಂತಾಗಬೇಕು. ಪಾಲಿಕೆಯ ಶಾಲೆಗಳಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದು, ಖಾಯಂ ಶಿಕ್ಷಕರು ಶೇ.20 ರಷ್ಟಿದ್ದರೆ, ಉಳಿದ ಶೇ.80 ರಷ್ಟು ಶಿಕ್ಷಕರು ಹೊರಗುತ್ತಿಗೆ ಆಧಾರದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿ ಅವರನ್ನೇ ಸದೃಢವಾಗಿಸಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಕೆಲಸ ಮಾಡಬೇಕು” ಎಂದರು.
“ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕೆ ಬೇಕಾದಂತಹ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ನೀಡುವ ಮಾದರಿಯನ್ನು ಕಾಲ ಕಾಲಕ್ಕೆ ಬದಲಾಯಿಸಿಕೊಳ್ಳಬೇಕು. ಮಕ್ಕಳಲ್ಲಿ ವಿದ್ಯಾಭ್ಯಾಸದ ಜತೆಗೆ ಬೇರೆ ಬೇರೆ ಚಟುವಟಿಕೆಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.
“ಶೈಕ್ಷಣಿಕ ಬೆಂಗಳೂರು ವಿಚಾರವಾಗಿ ವಿಚಾರ ಸಂಕಿರಣದಲ್ಲಿ ಬರುವ ಸಲಹೆಗಳನ್ನು ಪರಿಗಣಿಸಿ ವರದಿ ತಯಾರಿಸಲಾಗುವುದು. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬರುವ ಎಲ್ಲ 8 ವಿಷಯಗಳಿಗೆ ಸಂಬಂಧಿಸಿದಂತೆ ಬಂದಂತಹ ಸಲಹೆ/ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಒಂದು ದಿನ ಸಮಾವೇಶ ನಡೆಸಿ ಅಂತಿಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ಬಳಿಕ, ಸರ್ಕಾರವು ಎಲ್ಲ 8 ವಿಷಯಗಳ ಆಧಾರದ ಮೇಲೆ ಯೋಜನೆ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಿದೆ” ಎಂದು ತಿಳಿಸಿದರು.
ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, “ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 8 ನಾನಾ ವಿಷಯಗಳ ಕುರಿತು ಸಾರ್ವಜನಿಕರಿಂದ ಸಲಹೆ/ಅಭಿಪ್ರಾಯ ಪಡೆದು ಅದನ್ನು ಕ್ರೋಡೀಕರಿಸಿ ವರದಿ ಸಿದ್ದಪಡಿಸಲಾಗುತ್ತಿದೆ. ಶೈಕ್ಷಣಿಕ ಬೆಂಗಳೂರು ವಿಚಾರವಾಗಿ ನಗರದಲ್ಲಿ ಉನ್ನತ ಮಟ್ಟದ ಶಿಕ್ಷಣ ನೀಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ನಿಫಾ ವೈರಸ್ | ಸೋಂಕಿತ ಪ್ರದೇಶಗಳಲ್ಲಿ ಅನಗತ್ಯ ಓಡಾಡದೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ
ವಿಚಾರ ಸಂಕಿರಣದಲ್ಲಿ ಬಂದ ಪ್ರಮುಖ ಸಲಹೆಗಳು
- ಬೆಂಗಳೂರು ಎಜುಕೇಷನ್ ಹಬ್ ಆಗಿದ್ದು, ಡಿಜಿಟಲ್/ಆರ್ಟಿಫಿಶಿಯಲ್ ಇಂಟಲಿಜೆಂಟ್ ಆಗಿ ಬದಲಾವಣೆಗೆ ಆದ್ಯತೆ ನೀಡುವುದು.
- ಬೆಂಗಳೂರಿನಲ್ಲಿ ಉತ್ತಮ ರೀತಿಯ ಶಿಕ್ಷಣ ನೀತಿಯನ್ನು ಕಾಲಕಾಲಕ್ಕೆ ಉನ್ನತೀಕರಿಸಬೇಕು.
- ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು.
- ಕ್ಲಸ್ಟರ್ ವ್ಯವಸ್ಥೆಯ ಶಿಕ್ಷಣಕ್ಕೆ ಒತ್ತು ನೀಡುವುದು.
- ಸ್ಕಿಲ್ ಸೆಂಟರ್ಗಳನ್ನು ತೆರೆಯುವುದು.
- ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ನೀಡಬೇಕು.
- ಸಿಎಸ್ಆರ್ ಅನುದಾನವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ನೀಡುವುದು.
- ಡಿಜಿಟಲ್ ಗ್ರಂಥಾಲಯಗಳನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ತೆರೆಯುವುದು.
- ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕೌನ್ಸೆಲಿಂಗ್ ನೀಡುವುದು.
- ವರ್ಚ್ಯುವಲ್ ಶಿಕ್ಷಣಕ್ಕೆ ಆದ್ಯತೆ ನೀಡಿ, ಆ ಬಗ್ಗೆ ಶಿಕ್ಷಣ ವೃಂದಕ್ಕೆ ತರಬೇತಿ ನೀಡುವುದು.
- ಮಕ್ಕಳಲ್ಲಿ ಸಂವಹನ ಕೌಶಲ್ಯದ ಬಗ್ಗೆ ಹೆಚ್ಚು ತಿಳಿವಳಿಕೆ ನೀಡಬೇಕು.
- ಬಡ ವರ್ಗದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು.
- ಮಾತೃ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಮಕ್ಕಳಿಗೆ ಆ ಬಗ್ಗೆ ತಿಳಿಸುವ ಕೆಲಸ ಮಾಡಬೇಕು.
- ಅಧ್ಯಯನದ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡಬೇಕು.
ಈ ವೇಳೆ, ಶಿಕ್ಷಣ ವಿಭಾಗದ ಉಪ ಆಯುಕ್ತ ವೆಂಕಟರಾಜು, ಶಿಕ್ಷಣ ತಜ್ಞರಾದ ಡಾ. ವೇಣುಗೋಪಾಲ್, ಡಾ. ಗೀತಾ ರಾಮಾನುಜಂ, ಪ್ರೊ. ಕೆ.ಇ ರಾಧಾಕೃಷ್ಣ, ರಾಮಕೃಷ್ಣ ರೆಡ್ಡಿ ಸೇರಿದಂತೆ ನಾನಾ ಕಾಲೇಜುಗಳು ಉಪನ್ಯಾಸಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.