ರಾಜ್ಯ ರಾಜಧಾನಿ ಬೆಂಗಳೂರು ತನ್ನ ಹವಾಮಾನದಿಂದ ಬಹಳಷ್ಟು ಜನರನ್ನು ತನ್ನತ್ತ ಸೆಳೆಯುತ್ತದೆ. ದೇಶ-ವಿದೇಶಗಳ ನಾನಾ ಭಾಗಗಳಿಂದ ಜನರು ವಲಸೆ ಬಂದು ನಗರದಲ್ಲಿಯೇ ನೆಲೆಸಿದ್ದು, ಮೂಲ ಬೆಂಗಳೂರಿಗರು ಕಾಣಸಿಗುವುದೇ ಕಷ್ಟವಾಗಿದೆ. ಕ್ರಿ.ಶ 1537ರವರೆಗೆ ಗಂಗರು, ಚೋಳರು ಹಾಗೂ ಹೊಯ್ಸಳರ ಆಳ್ವಿಕೆಗೆ ಈ ನಗರ ಒಳಪಟ್ಟಿತ್ತು. ನಂತರ ವಿಜಯನಗರ ಸಾಮ್ರಾಜ್ಯದ ಸಾಮಂತ ನಾಡಪ್ರಭು ಕೆಂಪೇಗೌಡರು ಮಣ್ಣಿನ ಕೋಟೆ ನಿರ್ಮಾಣ ಮಾಡಿ ಆಧುನಿಕ ಬೆಂಗಳೂರು ಉದಯಕ್ಕೆ ಕಾರಣಕರ್ತರಾದರು.
ಅಂದು-ಇಂದಿಗೆ ರಾಜಧಾನಿ ಅಪಾರವಾಗಿ ಬದಲಾವಣೆ ಕಂಡಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಮೊದಲು ಬೆಂದಕಾಳೂರು ಆಗಿತ್ತು. ನಂತರದ ದಿನಗಳಲ್ಲಿ ‘ಕೆರೆಗಳ ನಗರಿ’, ‘ಕಲ್ಯಾಣ ನಗರಿ’, ‘ಉದ್ಯಾನ ನಗರಿ’ ಎಂದು ಕರೆಸಿಕೊಂಡಿತ್ತು. ನಗರೀಕರಣ ಬೆಳೆಯುತ್ತಾ ಹೋದಂತೆ ‘ಸಿಲಿಕಾನ್ ವ್ಯಾಲಿ’, ‘ಗಾರ್ಬೇಜ್ ಸಿಟಿ’ ಎಂಬ ಹಲವಾರು ಬಿರುದುಗಳನ್ನು ಪಡೆದುಕೊಂಡಿತು.
ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ 10 ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಭಾರತದ 5ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ವಿಕ್ಟೋರಿಯಾ ಆಸ್ಪತ್ರೆ
1897ರಲ್ಲಿ ವಿಕ್ಟೋರಿಯಾ ರಾಣಿಯ 60 ವರ್ಷಗಳ ಆಳ್ವಿಕೆ (ವಜ್ರ ಮಹೋತ್ಸವ) ಪೂರ್ಣಗೊಂಡ ನೆನಪಿಗಾಗಿ ಮೈಸೂರಿನ ಅಂದಿನ ಮಹಾರಾಣಿ ರಾಜಪ್ರತಿನಿಧಿ ಕೆಂಪನಂಜಮ್ಗಮಣ್ಣಿ ಅವರು ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದರು. 1900 ಡಿಸೆಂಬರ್ 8 ರಂದು ಅಂದಿನ ವೈಸರಾಯ್ ಆಗಿದ್ದ ಲಾರ್ಡ್ ಕರ್ಜನ್ ಅವರು ಈ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಅಂದು 140 ಹಾಸಿಗೆ ಸೌಲಭ್ಯದಿಂದ ಆರಂಭವಾದ ಆಸ್ಪತ್ರೆ ಇದೀಗ 1000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವನ್ನು ಹೊಂದಿದೆ. ಭಾರತದ ಎರಡನೇ ಅತಿದೊಡ್ಡ ಆಸ್ಪತ್ರೆಯಾಗಿದೆ.
ಟೌನ್ ಹಾಲ್
1933ರ ಮಾರ್ಚ್ 6ರಂದು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ಟೌನ್ಹಾಲ್ ಕಟ್ಟಡಕ್ಕೆ ಅಡಿಪಾಯ ಹಾಕಿದರು. ಈ ಕಟ್ಟಡದವನ್ನು ಸರ್ ಮಿರ್ಜಾ ಇಸ್ಮಾಯಿಲ್ ಅವರು ವಿನ್ಯಾಸಗೊಳಿಸಿದರು. 1935 ಸೆಪ್ಟೆಂಬರ್ 11ರಂದು ಕಟ್ಟಡ ಪೂರ್ಣಗೊಂಡಿತು. ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕಾರ್ಯಾರಂಭಿಸಿ, ಉದ್ಘಾಟಿಸಿದರು.
ಈ ಸುದ್ದಿ ಓದಿದ್ದೀರಾ? ಅಂತಾರಾಷ್ಟ್ರೀಯ ದಾದಿಯರ ದಿನ | ‘ನರ್ಸ್’ ಎಂಬುದು ಹುದ್ದೆಯಲ್ಲ, ಅದೊಂದು ಸೇವೆ
ಈ ಸಭಾಂಗಣವು ಎರಡು ಮಹಡಿಗಳನ್ನು ಹೊಂದಿದೆ. ಈ ಹಿಂದೆ 1,038 ಆಸನಗಳ ಸಾಮರ್ಥ್ಯವನ್ನು ಹೊಂದಿತ್ತು. ನವೀಕರಣದ ನಂತರ 810 ಆಸನ ಸಾಮರ್ಥ್ಯಕ್ಕೆ ಇಳಿಸಲಾಗಿದೆ.
ಬೆಂಗಳೂರು ನಗರ ಪುರಸಭೆಯ ಮಾಜಿ ಅಧ್ಯಕ್ಷರಾದ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿಯವರ ಹೆಸರನ್ನು ಈ ಕಟ್ಟಡಕ್ಕೆ ಇಡಲಾಗಿದೆ. ಸ್ಥಳೀಯವಾಗಿ ಬೆಂಗಳೂರು ಟೌನ್ ಹಾಲ್ ಎಂದು ಕರೆಯುತ್ತಾರೆ.
ರಸೆಲ್ ಮಾರುಕಟ್ಟೆ
ರಸೆಲ್ ಮಾರ್ಕೆಟ್ ಬೆಂಗಳೂರಿನ ಶಾಪಿಂಗ್ ಮಾರುಕಟ್ಟೆಯಾಗಿದ್ದು, ಇದನ್ನು ಬ್ರಿಟಿಷರು 1927ರಲ್ಲಿ ನಿರ್ಮಿಸಿದರು. 1933ರಲ್ಲಿ ಇಸ್ಮಾಯಿಲ್ ಸೇಟ್ ಅವರು ಉದ್ಘಾಟಿಸಿದರು. ಇದಕ್ಕೆ ಅಂದಿನ ಮುನ್ಸಿಪಲ್ ಕಮಿಷನರ್ ಟಿ ಬಿ ರಸೆಲ್ ಅವರ ಹೆಸರಿಡಲಾಗಿದೆ.
ಪ್ರಾಚೀನ ವಸ್ತುಗಳು ಮತ್ತು ಸೆಕೆಂಡ್ ಹ್ಯಾಂಡ್ ಸರಕುಗಳಿಂದ ಹಿಡಿದು ಮಾಂಸಹಾರ, ಹಣ್ಣುಗಳು ಸೇರಿದಂತೆ ನಾನಾ ಬಗೆಯ ಒಟ್ಟು 475 ಅಂಗಡಿಗಳಿವೆ.
ವಿಧಾನಸೌಧ
ರಾಜಧಾನಿ ಬೆಂಗಳೂರಿನ ಕಿರೀಟದಂತಿರುವ ವಿಧಾನಸೌಧಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1951 ಜುಲೈ 13ರಂದು ಶಂಕುಸ್ಥಾಪನೆ ಮಾಡಿದ್ದರು. 1952ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಗಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಅಂದರೆ 1956ರಲ್ಲಿ ಪೂರ್ಣಗೊಂಡಿತು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ವಿಧಾನಸೌಧ ನಿರ್ಮಾಣವಾಯಿತು.
ಬ್ರಿಗೇಡ್ ರಸ್ತೆ
ಬ್ರಿಗೇಡ್ ರಸ್ತೆ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ವ್ಯಾಪಾರಿ ಸ್ಥಳಗಳಲ್ಲಿ ಬ್ರಿಗೇಡ್ ರಸ್ತೆಯೂ ಒಂದು.
ಒಂದು ಕಾಲದಲ್ಲಿ ಇದು ಕಂಟೋನ್ಮೆಂಟ್ ಪ್ರದೇಶದ ಪ್ರಶಾಂತ ರಸ್ತೆಯಾಗಿತ್ತು. ಆದರೆ, ಈಗ ಸಮಯ ಬದಲಾದಂತೆಲ್ಲ ಇದು ಅಭಿವೃದ್ಧಿ ಹೊಂದುತ್ತಿರುವ ವಾಣಿಜ್ಯ ಕೇಂದ್ರವಾಗಿದೆ.