- ಆನಂದ್ ಕುಮಾರ್ ಅವರು ಒಟ್ಟು ₹30.04 ಲಕ್ಷ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ
- 2015ರಲ್ಲಿ ಯಾವುದೇ ಆದಾಯವಿಲ್ಲ ಎಂದಿದ್ದ ಅವರು ಈಗ ₹30 ಲಕ್ಷ ಆಸ್ತಿ ಘೋಷಿಸಿಕೊಂಡಿದ್ದಾರೆ
ಬೆಂಗಳೂರಿನ ಸಿ.ವಿ.ರಾಮನ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಕಾರ್ಪೊರೇಟರ್ ಆನಂದ್ ಕುಮಾರ್ ಅವರು ನಾಮಪತ್ರದಲ್ಲಿ ಹಲವು ತಪ್ಪು ಮಾಹಿತಿ ನೀಡಿದ್ದಾರೆ ಹಾಗೂ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಸಿ.ವಿ.ರಾಮನ್ ಕ್ಷೇತ್ರದ ಅಭ್ಯರ್ಥಿ ಮೋಹನ್ ದಾಸರಿ ಆರೋಪ ಮಾಡಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಆರೋಪಕ್ಕೆ ಸಂಬಂಧಿಸಿ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಆನಂದ್ ಕುಮಾರ್ ಅವರು 2015ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮಗೆ ಯಾವುದೇ ಆದಾಯವಿಲ್ಲವೆಂದು ಘೋಷಿಸಿಕೊಂಡಿದ್ದರು. ಆದರೆ, ಈ ಬಾರಿಯ ನಾಮಪತ್ರದಲ್ಲಿ, ಉಳಿತಾಯ ಖಾತೆಯಲ್ಲಿ ₹2.49 ಲಕ್ಷ, ನಗದು ರೂಪದಲ್ಲಿ ₹2.25 ಲಕ್ಷ ಹಾಗೂ ತಾಯಿಯ ಬಳಿ ₹8.8 ಲಕ್ಷ ಮೌಲ್ಯದ 160 ಗ್ರಾಂ ಚಿನ್ನವಿದೆ ಹಾಗೂ ಮಣಿಕಂಠನ್ ಎಂಬುವವರಿಗೆ ₹16.5 ಲಕ್ಷ ಸಾಲ ನೀಡಿರುವುದಾಗಿ ತಿಳಿಸಿದ್ದಾರೆ” ಎಂದರು.
“ಆನಂದ್ ಕುಮಾರ್ ಅವರು ಒಟ್ಟು ₹30.04 ಲಕ್ಷ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ₹29.57 ಲಕ್ಷ ಆದಾಯವಿದೆಯೆಂದು ಐಟಿಆರ್ ಸಲ್ಲಿಸಿದ್ದಾರೆ. 2015ರಲ್ಲಿ ಯಾವುದೇ ಆದಾಯವಿಲ್ಲವೆಂದು ಹೇಳಿದ್ದ ಅವರು ಈಗ ₹30 ಲಕ್ಷ ಆಸ್ತಿ ಘೋಷಿಸಿಕೊಂಡಿದ್ದಾರೆ” ಎಂದು ಹೇಳಿದರು.
“2015ರ ಪ್ರಮಾಣಪತ್ರದಲ್ಲಿ 3ನೇ ತರಗತಿ ಪಾಸಾಗಿದೆ ಎಂದು ಹೇಳಿದ್ದರು. ಆದರೆ, ಈಗಿನ ಪ್ರಮಾಣಪತ್ರದಲ್ಲಿ ಎಂಟನೇ ತರಗತಿ ಎಂದು ಹೇಳಿದ್ದಾರೆ. ಅವರು ಸ್ವಂತ ಮನೆ ಕಟ್ಟಿಸುತ್ತಿರುವ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ. ಆದರೆ, ಅದರ ಮಾಹಿತಿಯನ್ನು ಏಕೆ ನೀಡಿಲ್ಲ? ಆನಂದ್ ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದ್ದು, ಹೈಕೋರ್ಟ್ ಮೊರೆ ಹೋಗಲು ಕೂಡ ನಿರ್ಧರಿಸಿದ್ದೇವೆ” ಎಂದು ಮೋಹನ್ ದಾಸರಿ ತಿಳಿಸಿದರು.
“ಆನಂದ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣವಿದೆ. ಲೋಕಾಯುಕ್ತವು ಎಷ್ಟೇ ನೋಟಿಸ್ ಜಾರಿ ಮಾಡಿದರೂ ಇವರು ವಿಚಾರಣೆಗೆ ಹಾಜರಾಗಿಲ್ಲ. ಅದು ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಸಂಬಂಧಿಸಿದ ಒಂಟಿ ಮನೆ ಯೋಜನೆಯಲ್ಲಾದ ₹8 ಕೋಟಿ ಮೊತ್ತದ ಭ್ರಷ್ಟಾಚಾರದ ಪ್ರಕರಣ. ಕಾನೂನುಗಳನ್ನು ಉಲ್ಲಂಘಿಸಿ ಒಂದೇ ಮನೆ ಮೇಲೆ ಹಲವು ಸಾಲ ಮಾಡಲಾಗಿದೆ ಹಾಗೂ ಅನರ್ಹರಿಗೂ ಮನೆ ನೀಡಲಾಗಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಲೋಕಾಯುಕ್ತಕ್ಕೆ ಹೋಗಲು ಹೆದರಿಕೆಯೇಕೆ?” ಎಂದು ಮೋಹನ್ ದಾಸರಿ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೌಡಿಶೀಟರ್ ಮನೆಯಲ್ಲಿ 105 ಕೆಜಿ ಗಾಂಜಾ, ಮಾರಕಾಸ್ತ್ರ ವಶಪಡಿಸಿಕೊಂಡ ಪೊಲೀಸರು
ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, “ಲಿಂಗಾಯತ ಸಿಎಂ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬಿಜೆಪಿಯು ಹಿರಿಯ ನಾಯಕರನ್ನೆಲ್ಲ ಕಡೆಗಣಿಸುತ್ತಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಈಗಾಗಲೇ ಬಿಜೆಪಿಯನ್ನು ತೊರೆದಿದ್ದಾರೆ. ಈಶ್ವರಪ್ಪನವರಿಗೆ ಟಿಕೆಟ್ ನೀಡಿಲ್ಲ. ಸೋಮಣ್ಣರವರನ್ನು ಹರಕೆಯ ಕುರಿ ಮಾಡಿ ಬೇರೆ ಎರಡು ಕ್ಷೇತ್ರಗಳಿಗೆ ಕಳುಹಿಸಿದ್ದಾರೆ. ಇದರಲ್ಲಿ ಸಂಘ ಪರಿವಾರದ ಹುನ್ನಾರ ಕಾರ್ಯರೂಪಕ್ಕೆ ಬರುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಯಡಿಯೂರಪ್ಪನವರ ಮಕ್ಕಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಆದರೆ, ಈಶ್ವರಪ್ಪ, ಸೋಮಣ್ಣರವರ ಮಕ್ಕಳಿಗೆ ಸಿಕ್ಕಿಲ್ಲ. ಬಿಜೆಪಿಯು ಎಲ್ಲ ಸಮುದಾಯಗಳನ್ನು ಮೆಟ್ಟಿಲಾಗಿ ಬಳಸಿಕೊಂಡು, ಒಂದೊಂದೇ ಸಮುದಾಯಗಳನ್ನು ತಿರಸ್ಕಾರ ಮಾಡುತ್ತಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿ.ವಿ.ರಾಮನ್ ನಗರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಲೋಕೇಶ್, ಮಂಜುನಾಥ್ ಗೌಡ, ಜಗದೀಶ್ ಬಾಬು ಮತ್ತಿತರರು ಭಾಗವಹಿಸಿದ್ದರು.