ಇಂದಿರಾ ಕ್ಯಾಂಟೀನ್ | ಇನ್ಮುಂದೆ ಬಿಸಿಬಿಸಿ ರಾಗಿ ಮುದ್ದೆ ಜತೆಗೆ ಪಾಯಸ

Date:

Advertisements
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರಕ್ಕೆ ಈ ಹಿಂದೆ ನೀಡಲಾಗುತ್ತಿದ್ದ ಉಪ್ಪಿಟ್ಟು, ಕೇಸರಿ ಬಾತ್, ಪುಳಿಯೊಗರೆ, ಖಾರಾಬಾತ್, ಪೊಂಗಲ್ ರವಾ ಕಿಚಡಿ, ಚಿತ್ರಾನ್ನ, ಇಡ್ಲಿ ಜೊತೆಗೆ ಇನ್ನುಮುಂದೆ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳಿಗೆ ಹಸಿವನ್ನು ‘ಇಂದಿರಾ ಕ್ಯಾಂಟೀನ್’ ನೀಗಿಸುತ್ತಿದೆ. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರಂಭಿಸಿದ ಮಹಾತ್ವಾಕಾಂಕ್ಷೆಯ ಈ ಯೋಜನೆ ಹಲವಾರು ಜನರಿಗೆ ಅಕ್ಷಯ ಪಾತ್ರೆಯಾಗಿದೆ. ಈಗ ಮತ್ತೊಂದು ಮೈಲಿನತ್ತ ಸಾಗುತ್ತಿದೆ.

ಕಡಿಮೆ ದರದಲ್ಲಿ ಬಡಜನರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಈಗ ಮತ್ತಷ್ಟು ನಾನಾ ಬಗೆಯ ಆಹಾರಗಳು ದೊರೆಯಲಿವೆ. ಕ್ಯಾಂಟೀನ್‌ನ ‘ಆಹಾರ ಪಟ್ಟಿ’ (ಮೆನು) ಬದಲಾಗಿದೆ. ಗುಣಮಟ್ಟದ ಶುಚಿ-ರುಚಿ ಊಟ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರಕ್ಕೆ ಈ ಹಿಂದೆ ನೀಡಲಾಗುತ್ತಿದ್ದ ಉಪ್ಪಿಟ್ಟು, ಕೇಸರಿ ಬಾತ್, ಪುಳಿಯೊಗರೆ, ಖಾರಾಬಾತ್, ಪೊಂಗಲ್ ರವಾ ಕಿಚಡಿ, ಚಿತ್ರಾನ್ನ, ಇಡ್ಲಿ ಜೊತೆಗೆ ಈಗ ಬ್ರೆಡ್ ಜಾಮ್ ಹಾಗೂ ಮಂಗಳೂರು ಬನ್ಸ್ ಕೂಡ ನೀಡಲಾಗುತ್ತದೆ. ರಾಜ್ಯದ ನಾನಾ ಪ್ರದೇಶದ ಆಹಾರ ಶೈಲಿಯಲ್ಲೂ ಉಪಾಹಾರ ದೊರೆಯಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Advertisements

ಇನ್ನು ಮಧ್ಯಾಹ್ನದ ಊಟದಲ್ಲಿ ದಕ್ಷಿಣ ಕರ್ನಾಟಕ ಶೈಲಿ ಅದರಲ್ಲೂ ಮಂಡ್ಯ-ಹಾಸನ ಜಿಲ್ಲೆಯಲ್ಲಿ ಪ್ರಸಿದ್ಧವಾದ ಮುದ್ದೆ, ಸೊಪ್ಪು ಸಾರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಹಿ ಪಾಯಸ ಅಥವಾ ಸಿಹಿ ತಿಂಡಿಯನ್ನೂ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದೆಲ್ಲದರ ಜೊತೆಗೆ, ಬೆಂಗಳೂರಿನಲ್ಲಿ ಉಪಾಹಾರದ ದರವನ್ನೂ ಹೆಚ್ಚಿಸಲಾಗಿದ್ದು, ಬೆಳಗ್ಗಿನ ತಿಂಡಿಗೆ ಕೇವಲ ₹5 ಇದ್ದು, ಅದನ್ನು ₹10ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಈ ಹಿಂದಿನಂತೆ ₹10 ಬೆಲೆಯಿದೆ. ಊಟದಲ್ಲಿ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಜೊತೆಗೆ ಹೊಸದಾಗಿ ಸಿಹಿ ಪಾಯಸ ಮತ್ತು ದಿನ ಬಿಟ್ಟು ದಿನ ಮುದ್ದೆ, ಸೊಪ್ಪುಸಾರು ಊಟ ಹಾಗೂ ಮುದ್ದೆ ಇಲ್ಲದ ದಿನ ಚಪಾತಿ, ಸಾಗು ನೀಡಲು ಮೆನು ಸಿದ್ಧಪಡಿಸಲಾಗಿದೆ.

ರಾತ್ರಿ ಊಟಕ್ಕೆ ಟೊಮೆಟೋ ಬಾತ್, ಮೊಸರನ್ನ, ವಾಂಗಿಬಾತ್, ಬಿಸಿಬೆಳೆ ಬಾತ್, ಮೆಂತ್ಯೆ ಪಲಾವ್, ಪುಳಿಯೊಗರೆ, ಪಲಾವ್ ನೀಡಲಾಗುತ್ತಿದೆ. ಅದನ್ನೇ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ.

ಮೊಟ್ಟೆ ನೀಡಿ ಎಂದ ಆಹಾರ ತಜ್ಞರು

ವಾರದಲ್ಲಿ ಮೂರು ದಿನವಾದರೂ ಕೋಳಿ ಮೊಟ್ಟೆಯನ್ನು ನೀಡಬೇಕು ಇದರಿಂದ ಜನರಲ್ಲಿ ಪೌಷ್ಠಿಕಾಂಶ ಕೊರತೆಯನ್ನು ಸ್ವಲ್ಪಮಟ್ಟಿಗೆ ಆದರೂ ನೀಗಿಸಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರ ನೀಡಲು ಕೋಳಿ ಮೊಟ್ಟೆ ಅತ್ಯುತ್ತಮವಾದ ಆಹಾರ ಎಂದು ಆಹಾರ ತಜ್ಞರು ಹಾಗೂ ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ನವೀಕರಣದ ಸಭೆಯಲ್ಲಿ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಬೇಯಿಸಿದ ಮೊಟ್ಟೆಗಳನ್ನು ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ದುಬಾರಿ ವೆಚ್ಚವಾಗುತ್ತದೆ. ಅಂತಹ ಯಾವುದೇ ಪ್ರಸ್ತಾಪವನ್ನು ಅಧಿಕೃತವಾಗಿ ಚರ್ಚಿಸಲಾಗಿಲ್ಲ. ಇದಲ್ಲದೆ, ಇಂದಿರಾ ಕ್ಯಾಂಟೀನ್‌ಗಳ ಪರಿಕಲ್ಪನೆಯು ಜೀವನಾಧಾರದ ಆಹಾರವನ್ನು ಒದಗಿಸುವುದು. ಆದರೆ, ಐಷಾರಾಮಿ ಆಹಾರವಲ್ಲ ಎಂದು ಹಿರಿಯ ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಹಾರದ ಪ್ರಮಾಣದಲ್ಲೂ ಹೆಚ್ಚಳ

“ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಾಹಾರಕ್ಕೆ ₹5 ಮತ್ತು ಊಟಕ್ಕೆ ₹10 ಪಡೆಯಲಾಗುತ್ತದೆ. ಇದರಿಂದ ತಲಾ ಒಬ್ಬರಿಗೆ ಮೂರು ಹೊತ್ತಿನ ಊಟಕ್ಕೆ ₹25 ತಗುಲುತ್ತದೆ. ಇದಕ್ಕೆ ಬಿಬಿಎಂಪಿ ₹42 ಹೆಚ್ಚುವರಿ ಸಹಾಯಧನವನ್ನು ನೀಡುತ್ತದೆ. ಗುತ್ತಿಗೆದಾರರು ಪ್ರತಿ ವ್ಯಕ್ತಿಗೆ ಮೂರು ಹೊತ್ತಿನ ಊಟಕ್ಕೆ ₹67 ನಿಗದಿಪಡಿಸಲಾಗಿದೆ. ಊಟಕ್ಕೆ ಲಭ್ಯವಿರುವ ವಸ್ತುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಚಿಂತಿಸಿದ್ದೇವೆ. ಜನರಿಗೆ ಬಡಿಸಬೇಕಾದ ಆಹಾರ ಪ್ರಮಾಣವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

“ಎಲ್ಲ ಹಣಕಾಸಿನ ಕೊರತೆಯನ್ನು ಸರಿಪಡಿಸಿದ ನಂತರ ಚಾಲನೆಯಲ್ಲಿರುವ ಒಟ್ಟು 175 ಕ್ಯಾಂಟೀನ್‌ಗಳನ್ನು ನವೀಕರಿಸಲಾಗುತ್ತದೆ. ಬಾಕಿ ಪಾವತಿಸದ ಕಾರಣ ಹಲವು ಕ್ಯಾಂಟೀನ್‌ಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದೆ. ಬಿಜೆಪಿ ಆಡಳಿತದಲ್ಲಿ ಸ್ಥಗಿತಗೊಂಡಿದ್ದ 20ಕ್ಕೂ ಹೆಚ್ಚು ಕ್ಯಾಂಟೀನ್‌ಗಳನ್ನು ಪುನಶ್ಚೇತನಗೊಳಿಸಲಾಗುವುದು. ಇವುಗಳ ಹೊರತಾಗಿ ನಗರದಲ್ಲಿ ಹೆಚ್ಚುವರಿಯಾಗಿ 50 ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಪ್ರತಿ ವಾರ್ಡ್‌ಗೆ ಒಂದರಂತೆ ಕ್ಯಾಂಟೀನ್‌ಗಳನ್ನು ಯೋಜಿಸಲಾಗಿತ್ತು. ಈಗ 198 ರಿಂದ 243 ವಾರ್ಡ್‌ಗಳಿಗೆ ಏರಿಕೆಯಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

“ಇತರ ಕ್ಯಾಂಟೀನ್‌ಗಳಂತೆ ಪೂರ್ವ ನಿರ್ಮಿತ ಮಾದರಿಯಲ್ಲಿ ಹೊಸ ಕ್ಯಾಂಟೀನ್‌ಗಳನ್ನು ನಿರ್ಮಿಸಬೇಕೆ ಎಂದು ನಾವು ಇನ್ನೂ ನಿರ್ಧರಿಸಿಲ್ಲ. ಇವುಗಳಲ್ಲಿ ಕೆಲವು ಕ್ಯಾಂಟೀನ್‌ಗಳನ್ನು ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಸರ್ಕಾರಿ ಆಸ್ಪತ್ರೆಗಳಂತಹ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ನಿರ್ಮಿಸಲಾಗುವುದು” ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಕೆ.ವಿ. ತ್ರಿಲೋಕ್ ಚಂದ್ರ ಹೇಳಿದರು.

ಒಂದು ದಿನಕ್ಕೆ ಊಟದಿಂದ ₹160 ಉಳಿತಾಯ

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಆಟೋ ಚಾಲಕ ಮಂಜುನಾಥ್, “ಕಳೆದ ಮೂರು ವರ್ಷದಿಂದ ನಾನು ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಮತ್ತು ಊಟ ಸೇವಿಸುತ್ತಿದ್ದೇನೆ. ಹೊರಗಡೆ ಒಂದು ಟೀ ಕುಡಿಯಬೇಕಾದರೆ ₹15 ರಿಂದ ₹25ರವರೆಗೆ ದರವಿದೆ. ಒಂದು ಇಡ್ಲಿಯ ಬೆಲೆ ₹20 ಒಂದು ತಟ್ಟೆ ಇಡ್ಲಿಗೆ ₹15 ರಿಂದ ₹20 ಇದೆ. ಮಧ್ಯಾಹ್ನದ ಮತ್ತು ರಾತ್ರಿಯ ಒಂದು ಹೊತ್ತಿನ ಊಟಕ್ಕೆ ಏನಿಲ್ಲವೆಂದರೂ ₹60 ರಿಂದ ₹70 ಬೇಕಾಗುತ್ತದೆ. ಒಟ್ಟು ದಿನಕ್ಕೆ ಊಟಕ್ಕಾಗಿಯೇ ₹170 ರಿಂದ ₹180 ಖರ್ಚಾಗುತ್ತದೆ. ಇಷ್ಟು ಖರ್ಚು ಮಾಡಿದರೂ ಕೂಡಾ ಹೊಟ್ಟೆ ಅರ್ಧಂಬರ್ಧ ತುಂಬುತ್ತದೆ” ಎಂದರು.

“ಆದರೆ, ಇಂದಿರಾ ಕ್ಯಾಂಟೀನ್‌ನಲ್ಲಿ ದಿನಕ್ಕೆ ಕೇವಲ ₹25 ಖರ್ಚಾಗುತ್ತದೆ. ಇದರಿಂದ ದಿನಕ್ಕೆ ₹160 ವರೆಗೂ ಉಳಿತಾಯ ಮಾಡಬಹುದು. ಇಂದಿರಾ ಕ್ಯಾಂಟೀನ್ ಬಡವರ ಪಾಲಿನ ಅಕ್ಷಯ ಪಾತ್ರೆ. ಊಟದ ಗುಣಮಟ್ಟ ಅತ್ಯುತ್ತಮವಾಗಿದೆ” ಎಂದು ಹೇಳಿದರು.

ಸಿದ್ದರಾಮಯ್ಯರ ಮಹತ್ವಾಕಾಂಕ್ಷಿ ಯೋಜನೆ

ಅತಿ ಕಡಿಮೆ ದರದಲ್ಲಿ ಬಡವರಿಗೆ ಮೂರು ಹೊತ್ತು ಊಟ ನೀಡಲು ಕ್ಯಾಂಟೀನ್‌ಗಳನ್ನು 2017ರ ಆಗಸ್ಟ್ 16ರಂದು ಆರಂಭಿಸಲಾಯಿತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಉದ್ಘಾಟಿಸಲಾಗಿತ್ತು. ತಮಿಳುನಾಡಿನ ‘ಅಮ್ಮಾ ಕ್ಯಾಂಟೀನ್’ ಮಾದರಿಯಲ್ಲಿ ಈ ಯೋಜನೆ ರೂಪಿಸಲಾಗಿತ್ತು.

ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಲತಾಯಿ ಧೋರಣೆಗೆ ಇಂದಿರಾ ಕ್ಯಾಂಟೀನ್ ಒಳಗಾಗಿತ್ತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಚಾಲ್ತಿಯಲ್ಲಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಆಗಿನ ಬಿಜೆಪಿ ಸರ್ಕಾರ ಅನುದಾನ ನೀಡುವುದನ್ನೇ ನಿಲ್ಲಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ಯಾಂಟೀನ್ ಅನ್ನು ನಿರ್ವಹಣೆ ಮಾಡುತ್ತಿತ್ತು. 2023-24ನೇ ಸಾಲಿನ  ಬಜೆಟ್‌ನಲ್ಲಿ ಕ್ಯಾಂಟೀನ್‌ಗೆ ಬಿಬಿಎಂಪಿ ₹50 ಕೋಟಿ ಮೀಸಲಿಟ್ಟಿತ್ತು. ಹೊರತಾಗಿ ಆಹಾರದ ಗುತ್ತಿಗೆಯ ಕಂಪನಿಗಳಿಗೆ ಬಾಕಿ ಬಿಲ್ ಮಾಡಲು ಕೂಡ ಬಿಬಿಎಂಪಿ ಸಂಕಷ್ಟ ಎದುರಿಸುತ್ತಿತ್ತು.

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್ ಕ್ಯಾಂಟೀನ್‌ಗಳು ಸಂಪೂರ್ಣ ಮುಚ್ಚಿಹೋಗಿದ್ದವು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೀರಿನ ಬಿಲ್ ತುಂಬದೇ ಇರುವುದಕ್ಕೆ ಬಿಡಬ್ಲೂಎಸ್ಎಸ್‌ಬಿ ನೀರು ಸರಬರಾಜು ನಿಲ್ಲಿಸಿದೆ. ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವುದಕ್ಕೆ ಬೆಸ್ಕಾಂ ಕೆಲವು ಕ್ಯಾಂಟೀನ್‌ಗಳಲ್ಲಿ ವಿದ್ಯುತ್ ಕಡಿತಗೊಳಿಸಿದೆ.

ಇಂದಿರಾ ಕ್ಯಾಂಟೀನ್‌ಗೆ ಮರುಜೀವ

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿ, ಮುಚ್ಚಲ್ಪಟ್ಟಿದ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ಪುನಃ ಆರಂಭಿಸಲಾಗುವುದು” ಎಂದಿದ್ದರು. ಈಗ ಅದರಂತೆಯೇ ನಗರದ 250 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಮರುಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X