- ಅತಿ ವೇಗದ ವಾಹನ ಚಾಲನೆ ಅಪಾಯಕಾರಿ
- ಕಳೆದ 9 ತಿಂಗಳಿನಲ್ಲಿ 595 ಅಪಘಾತ ಸಂಭವ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತದಿಂದ ಉಂಟಾಗುವ ಸಾವು-ನೋವು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ (ಎಎನ್ಪಿಆರ್) ಅಳವಡಿಕೆ ಮಾಡಲಾಗಿದೆ ಎಂದು ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದನ್ನು ಅಳವಡಿಕೆ ಮಾಡುವುದರಿಂದ ಅಪಘಾತ ಮತ್ತು ಸಾವು-ನೋವು ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇನೆ. ಭಾರತೀಯ ರಸ್ತೆಗಳಲ್ಲಿ ಅತಿ ವೇಗದ ಚಾಲನೆಯೂ ಪ್ರಮುಖ ಕೊಲೆಗಾರ” ಎಂದಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ಹೆಚ್ಚಾದ ಹಿನ್ನೆಲೆ, ಅಪಘಾತ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಈ ಹಿಂದೆ ತಿಳಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಎಕ್ಸ್‌ಪ್ರೆಸ್ ವೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಿಗದಿತ ಮಿತಿಗಿಂತ ಅತಿ ವೇಗವಾಗಿ ವಾಹನ ಚಾಲನೆ ಹಾಗೂ ಒನ್ ವೇನಲ್ಲಿ ವಾಹನ ಚಲಾವಣೆ ಮಾಡಿದ ವಾಹನ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ದಂಡ ಹಾಕಲಾಯಿತು.
ಹಾಗೆಯೇ, ರಾಮನಗರ ಪೊಲೀಸರು ವಾಹನದ ವೇಗ ಕಂಡು ಹಿಡಿಯುವ ಇಂಟರ್ ಸೆಪ್ಟರ್ (ಸ್ಪೀಡ್ ರಾಡರ್ ಗನ್) ಅನ್ನು ಎಕ್ಸ್‌ಪ್ರೆಸ್ ವೇನಲ್ಲಿ ಬಳಸಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಂಕಿತ ಉಗ್ರರಿಗೆ ವಿದೇಶದಿಂದ ಬಂದ ಗ್ರೆನೇಡ್ ; ಸಿಸಿಬಿ ತನಿಖೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅಪಘಾತಗಳು
ರಾಮನಗರ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 2022 ರ ಸೆಪ್ಟೆಂಬರ್‌ನಿಂದ 2023ರ ಜೂನ್ ವರೆಗೆ ಅಂದರೆ ಕಳೆದ 9 ತಿಂಗಳಿನಲ್ಲಿ ಒಟ್ಟು 595 ಅಪಘಾತಗಳು ಸಂಭವಿಸಿವೆ.
595 ಅಪಘಾತಗಳಲ್ಲಿ 158 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ, ಮಂಡ್ಯದಲ್ಲಿ 58 ಕಿ.ಮೀ ಹಾಗೂ ಮೈಸೂರಿನಲ್ಲಿ 5 ಕಿ.ಮೀ ಸೇರಿ ಒಟ್ಟು 118 ಕಿ.ಮೀ ದೂರದ ಎಕ್ಸ್‌ಪ್ರೆಸ್ ವೇ ಇದಾಗಿದೆ.
ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ ಸಾವನ್ನಪ್ಪಿದ್ದು, 52 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಹೊಸ ಬೈಪಾಸ್‌ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ.