- ಬಹುತೇಕ ಸ್ಕ್ರ್ಯಾಪ್ ಆಗಿರುವ ಬಸ್‌ನ ನವೀಕರಣಕ್ಕೆ ಸುಮಾರು ₹3 ಲಕ್ಷ ವೆಚ್ಚ
- ನವೀಕರಣಕ್ಕಾಗಿ ಸುಮಾರು 1,000 ಬಸ್‌ಗಳನ್ನು ಗುರುತಿಸಿದ ನಿಗಮದ ಎಂಡಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ರಾಜ್ಯಾದ್ಯಂತ ತನ್ನ ಎಲ್ಲ ವಿಭಾಗೀಯ ಡಿಪೋಗಳು ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸಲು ಪ್ರಾರಂಭಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಗಮವು ಆರ್ಥಿಕ ಹೊಡೆತದಿಂದ ಕಂಗೆಟ್ಟಿತ್ತು. ಆರ್ಥಿಕವಾಗಿ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ, ಹೊಸ ಬಸ್‌ಗಳನ್ನು ಖರೀದಿ ಮಾಡುವ ಬದಲಾಗಿ ಹಳೆಯ ಬಸ್‌ಗಳನ್ನು ನವೀಕರಣ ಮಾಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮುಂದಾಗಿದ್ದಾರೆ.
“ಹೊಸ ಬಸ್‌ಗಳನ್ನು ಖರೀದಿಸುವ ಬದಲು ಹಳೆಯ ಬಸ್‌ಗಳನ್ನು ನವೀಕರಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಹೊಸ ಬಸ್‌ಗೆ ಸುಮಾರು ₹40 ಲಕ್ಷ ವೆಚ್ಚವಾಗಲಿದ್ದು, ಬಹುತೇಕ ಸ್ಕ್ರ್ಯಾಪ್ ಆಗಿರುವ ಬಸ್‌ನ ನವೀಕರಣಕ್ಕೆ ಸುಮಾರು ₹3 ಲಕ್ಷ ವೆಚ್ಚವಾಗುತ್ತದೆ” ಎಂದು ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಎಲ್ಲ ಸರ್ಕಾರಿ ವಾಹನಗಳು 15 ವರ್ಷಗಳವರೆಗೆ ಬಳಕೆಗೆ ಅನುಮತಿ ಇದೆ. ನವೀಕರಣಕ್ಕಾಗಿ ಆಯ್ಕೆ ಮಾಡಿದ ಬಸ್‌ಗಳು ಸುಮಾರು 11-12 ವರ್ಷಗಳಷ್ಟು ಹಳೆಯವು. ಆದರೆ, ಹೆಚ್ಚಿನ ಬಳಕೆಯಿಂದಾಗಿ ಸ್ಕ್ರ್ಯಾಪ್ ಆಗುವ ಅಂಚಿನಲ್ಲಿದ್ದವು. ಉಳಿದ 3-4 ವರ್ಷಗಳವರೆಗೆ ನಾವು ಆ ಬಸ್‌ಗಳನ್ನು ಬಳಸಲಿದ್ದೇವೆ. ಈ ಬಸ್‌ಗಳು ಸಂಪೂರ್ಣ ಗುಜರಿಗೆ ತಲುಪುವ ವೇಳೆ, ಇಂತಹ ಮತ್ತಷ್ಟು ಹೆಚ್ಚಿನ ಬಸ್‌ಗಳು ನವೀಕರಣಕ್ಕಾಗಿ ಸಿದ್ಧವಾಗಿರುತ್ತವೆ” ಎಂದು ಹೇಳಿದರು.
“ಕೆಎಸ್‌ಆರ್‌ಟಿಸಿ ಬಳಿ ಇರುವ 8,100 ಬಸ್‌ಗಳಲ್ಲಿ ಸುಮಾರು ಬಸ್‌ಗಳು ತಲಾ 10 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಕ್ರಮಿಸಿದ್ದು, ಓಡಾಟದ ಅಂತ್ಯವನ್ನು ಸಮೀಪಿಸುತ್ತಿವೆ. ನಿಗಮದ ಮುಖ್ಯಸ್ಥರು ನವೀಕರಣಕ್ಕಾಗಿ ಸುಮಾರು 1,000 ಬಸ್‌ಗಳನ್ನು ಗುರುತಿಸಿದ್ದಾರೆ. ಕಳೆದ ಜುಲೈ-ಆಗಸ್ಟ್‌ನಲ್ಲಿ ಕೆಲಸ ಪ್ರಾರಂಭಿಸಿದ ನಂತರ, ನಿಗಮದ 494 ಬಸ್‌ಗಳನ್ನು ಯಶಸ್ವಿಯಾಗಿ ನವೀಕರಿಸಿದೆ” ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮರಗಳ ಸುತ್ತ ಕಾಂಕ್ರಿಟೀಕರಣ ; ಹೆಚ್ಚಿನ ಅಪಘಾತಗಳಿಗೆ ಕಾರಣವಾಗಬಹುದು ಎಂದ ತಜ್ಞರು
“ನಾವು ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲ ಭಾಗಗಳನ್ನು ಹೊರತೆಗೆಯುತ್ತೇವೆ. ಬಸ್‌ನ ಎಲ್ಲ ಭಾಗಗಳನ್ನು ಬಿಚ್ಚಿ ಮತ್ತೆ ಜೋಡಿಸುತ್ತೇವೆ. ಪ್ಯಾನೆಲಿಂಗ್ ಕೆಲಸ ಮುಗಿದಿದೆ. ಬಸ್‌ನ ಹೊರಭಾಗಕ್ಕೆ ಹೊಸ ಲೋಹದ ಹಾಳೆಗಳನ್ನು ಬಳಸಲಾಗುತ್ತದೆ. ಕಿಟಕಿಗಳು ಮತ್ತು ವಿಂಡ್‌ಶೀಲ್ಡ್‌ಗಳ ಮೇಲಿನ ಗ್ಲಾಸ್‌ಗಳನ್ನು ಬದಲಾಯಿಸಲಾಗುತ್ತದೆ. ಸೀಟ್ ಕುಶನ್‌ಗಳು ಮತ್ತು ಡ್ರೆಸಿಂಗ್‌ಗಳನ್ನು ಹೊಸ ಕೋಟ್‌ನೊಂದಿಗೆ ಪುನಃ ಮಾಡಲಾಗುತ್ತದೆ. ಎಂಜಿನ್ ಹದಗೆಟ್ಟಿದ್ದರೆ ಅದನ್ನು ನವೀಕರಿಸುವ ಸಾಮಥ್ಯವನ್ನು ಎಂಜಿನಿಯರ್‌ಗಳು ಹೊಂದಿದ್ದಾರೆ”ಎಂದು ಕೆಎಸ್‌ಆರ್‌ಟಿಸಿಯ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದರು.
“ಸುಮಾರು 15 ಡಿಪೋಗಳು ಮತ್ತು ಎರಡು ಪ್ರಾದೇಶಿಕ ಕಾರ್ಯಾಗಾರಗಳು ಈ ಕೆಲಸದಲ್ಲಿ ತೊಡಗಿವೆ. ನವೀಕರಣ ಕಾರ್ಯಕ್ರಮವು ಪ್ರಾರಂಭವಾದಾಗಿನಿಂದ ಕಾರ್ಯಾಗಾರಗಳು ತಿಂಗಳಿಗೆ ಸುಮಾರು 50 ಬಸ್‌ಗಳನ್ನು ಸಾಮೂಹಿಕವಾಗಿ ನವೀಕರಣಗೊಳಿಸುತ್ತಿವೆ. 494 ಬಸ್‌ಗಳ ನವೀಕರಣ ಪೂರ್ಣಗೊಂಡಿದ್ದು, ಇನ್ನೂ 500 ಬಸ್‌ಗಳು ನವೀಕರಣಕ್ಕಾಗಿ ಸಾಲಿನಲ್ಲಿವೆ” ಎಂದರು.