ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ರದ್ದುಗೊಂಡಿದ್ದ ಹಾಸ್ಟೆಲ್ ವಾರ್ಡನ್ ಹುದ್ದೆಗಳನ್ನು ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯದೆ ಮರು ಸೃಜಿಸಿ ತರಾತುರಿಯಲ್ಲಿ 312 ಹಾಸ್ಟೆಲ್ ವಾರ್ಡ್‌ನರಿಗೆ ಬಡ್ತಿ ನೀಡಲಾಗಿದೆ ಎಂದರೆ ಏನರ್ಥ? ಸಚಿವರಿಗೆ ಒಂದೊಂದು ಹುದ್ದೆಯಿಂದ ಎಷ್ಟು ಕಮಿಷನ್ ಸಂದಾಯವಾಗಿದೆ? ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಾಸ್ಟೆಲ್ ವಾರ್ಡ್‌ನರ ಬಡ್ತಿ ವಿಚಾರದ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭದಲ್ಲೆಲ್ಲ, ಅಧಿಸೂಚನೆಯಲ್ಲಿದ್ದ ನಿರ್ಬಂಧವನ್ನು ಉಲ್ಲೇಖಿಸುತ್ತಾ ಬಂದಿದ್ದ ಇಲಾಖೆಯು ದಿಢೀರ್ ನಿಲುವು ಬದಲಿಸಿದ್ದು ಯಾಕೆ? ಯಾರ ಸೂಚನೆಯ ಮೇರೆಗೆ ಈ ಬದಲಾವಣೆಯನ್ನು ಮಾಡಲಾಗಿದೆ? 312 ಮಂದಿಗೆ ಬಡ್ತಿ ನೀಡಿದ್ದರೂ, ಹುದ್ದೆಗಳ ಮಂಜೂರಾತಿಯೇ ಇಲ್ಲದಿರುವುದರಿಂದ ಅವರು ಹಾಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಲ್ಲೇ ಮುಂದುವರಿಸಿ ಆದೇಶ ನೀಡಲಾಗಿದೆ. ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿಲ್ಲದೆ ಇದು ಸಾಧ್ಯವೇ?” ಎಂದು ಪ್ರಶ್ನಿಸಿದರು.
₹11,495 ಕೋಟಿ ವಿಶೇಷ ಅನುದಾನ ಬಿಡುಗಡೆಗೆ ಎಎಪಿ ಒತ್ತಾಯ
“15ನೇ ಹಣಕಾಸು ಆಯೋಗವು 2020-21ನೇ ಸಾಲಿನ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನವನ್ನು ಹಾಗೂ ಬೆಂಗಳೂರು ಅಭಿವೃದ್ಧಿಗೆ ₹6000 ಕೋಟಿ ಸೇರಿಸಿದಂತೆ ಒಟ್ಟು ₹11495 ಕೋಟಿ ತಕ್ಷಣ ಬಿಡುಗಡೆ ಮಾಡಬೇಕು” ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
“2011-12ರಲ್ಲಿ ಎಲ್ಲ ರಾಜ್ಯಗಳ ಜಿಎಸ್‍ಡಿಪಿ ಸರಾಸರಿ ಶೇ.9ಕ್ಕಿಂತ ಕಡಿಮೆ ಇದ್ದರೆ, ನಮ್ಮ ರಾಜ್ಯದ ಜಿಎಸ್‍ಡಿಪಿಯನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಮೇಲಿನ ಮಲತಾಯಿ ಧೋರಣೆಯನ್ನು ತಕ್ಷಣ ಕೈಬಿಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸಣ್ಣ ಗುತ್ತಿಗೆದಾರರಿಗೆ ಮೊದಲ ಹಂತದ ಹಣ ಬಿಡುಗಡೆ ಮಾಡಿದ ಬಿಬಿಎಂಪಿ
“ಭ್ರಷ್ಟಾಚಾರದ ವಿಚಾರ ಬಂದಾಗೆಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಮುಂತಾದವರು ಬಿಜೆಪಿ ಕರ್ಮಕಾಂಡಗಳತ್ತಲೇ ಕೈತೋರಿಸುತ್ತಿದ್ದರು. ಆದರೆ, ತಮ್ಮದೇ ಸರ್ಕಾರದ ಇಲಾಖೆಗಳಲ್ಲಿ ಅಕ್ರಮಗಳ ಬಗ್ಗೆ ಏನೂ ಗೊತ್ತಿಲ್ಲದಂತೆ ಕುಳಿತಿದ್ದಾರೆ. ಬಾಯಿ ಬಿಟ್ಟರೆ ತಾವು ಸತ್ಯ ಹರಿಶ್ಚಂದ್ರನ ತುಂಡು ಎಂಬಂತೆ ಆಡುತ್ತಾರೆ. ಭ್ರಷ್ಟಾಚಾರದ ವಾಸನೆ ಕಂಡರೆ ಆಗದಂತೆ ವರ್ತಿಸುತ್ತಾರೆ. ಅದೆಲ್ಲವೂ ಬೂಟಾಟಿಕೆ ಎಂಬುದು ಬಹಿರಂಗವಾಗುತ್ತಿದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳುತ್ತಿದ್ದಾರೆ. ಅಧಿಕೃತವಾಗಿ ರದ್ದುಗೊಂಡ ನೂರಾರು ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಆದರೆ ಭ್ರಷ್ಟಾಚಾರ ಎಂದಿನಂತೆ ಎಗ್ಗಿಲ್ಲದೆ ಸಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
Old wine in the New bottle ಎನ್ನುವಂತೆ ಆಗಬಾರದು
ಆಡಳಿತ ಕಾಲ ಕಾಲಕ್ಕೆ ಸುಧಾರಣೆ ತರಬೇಕು
ಜನಪರಯೋಜನೆಗಳು ಜಾರಿಯಾಗಬೇಕು
ಆಡಳಿತ ನಡೆಸುವವರಲ್ಲಿ ಪಾರದರ್ಶಕತೆ ಇರಬೇಕು
ಅಧಿಕಾರ ನಶ್ವರ ಸಾಧನೆ ಸ್ಥಿರ