- ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮನು
- ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸಿದ್ದಕ್ಕೆ ದುಷ್ಕರ್ಮಿಗಳು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳುವನ್ನು ಮನು ಎಂದು ಗುರುತಿಸಲಾಗಿದೆ.
ರಾಜರಾಜೇಶ್ವರಿನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಮಗ ಮನು. ಈತ ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಯುವತಿಯ ಪೋಷಕರು ಈ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
ಕಳೆದ ಜುಲೈ 3ರಂದು ಯುವತಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಳು. ಆಕೆಯನ್ನು ಮನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದ. ಇದನ್ನು ತಿಳಿದ ಯುವತಿಯ ಪೋಷಕರು ಮನು ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿ ಯುವತಿಯನ್ನು ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.
ಈ ಘಟನೆ ನಡೆದ ಬಳಿಕ ಎಂದಿನಂತೆ ಮನು ಅವರ ತಂದೆ ಶನಿವಾರ ಬೆಳಿಗ್ಗೆ ಆತನನ್ನು ಕಾಲೇಜಿಗೆ ಬಿಟ್ಟು ಬಂದಿದ್ದರು. ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸ್ ಆಗಲು ಬಸ್ ಸ್ಟಾಪ್ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಮನುವನ್ನು ಅಪಹರಣ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಲನಟಿ ವಂಶಿಕಾ ಹೆಸರು ಹೇಳಿ ವಂಚನೆ ಮಾಡಿದ್ದ ಆರೋಪಿ ವಿರುದ್ಧ ಮತ್ತಷ್ಟು ದೂರು ದಾಖಲು
ಬಳಿಕ ಯುವಕ ಮನುವಿನ ಮೇಲೆ ಹಲ್ಲೆ ಮಾಡಿ, ಕೈ ಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಗಾಯಳು ಮನುನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.