- ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ
- ಮುಂದೆ ವೈಯಕ್ತಿಕ ಚಿಕಿತ್ಸಾಲಯಗಳನ್ನು ಅಪ್ಲಿಕೇಶನ್ನಲ್ಲಿ ಸೇರಿಸಬಹುದು
ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಐಐಎಸ್ಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜತೆಗೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಐಐಎಸ್ಸಿಯಲ್ಲಿರುವ ಎಐ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ಮುಖಾಂತರ ನಗರದಲ್ಲಿನ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಖಾಯಿಲೆಗಳ ಕುರಿತು ನಿಖರವಾದ ಡೇಟಾವನ್ನು ಸಂಗ್ರಹಿಸಲು ಪಾಲಿಕೆಗೆ ಸಹಾಯ ಮಾಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿ (ಐಎಚ್ಐಪಿ) ಸುಮಾರು 400 ಆಸ್ಪತ್ರೆಗಳು ಮಾತ್ರ ಖಾಯಿಲೆಗಳ ಡೇಟಾವನ್ನು ನಮೂದಿಸುತ್ತಿವೆ. ಡೆಂಗ್ಯೂನಂತಹ ಕಾಯಿಲೆಗಳ ಡೇಟಾ ಕೂಡ ವಿರಳವಾಗಿದೆ” ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆ.ವಿ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
“ಅಪ್ಲಿಕೇಶನ್ ಅನ್ನು ಮೊದಲು ಡೆಂಗ್ಯೂ ಕುರಿತ ಡೇಟಾ ಕಲೆಹಾಕಲು ಬಳಸಲಾಗುವುದು. ನಂತರ ಎಲ್ಲ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಮಾಹಿತಿಗಾಗಿ ಬಳಕೆ ಮಾಡಲಾಗುವುದು. ಖಾಸಗಿ ಸಂಸ್ಥೆಗಳನ್ನು ಅಪ್ಲಿಕೇಶನ್ ವ್ಯಾಪ್ತಿಗೆ ತರುವುದು ದೊಡ್ಡ ಸವಾಲಾಗಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಸಂಸ್ಥೆಗಳೊಂದಿಗೆ ಹಲವು ಬಾರಿ ಚರ್ಚಿಸಿದ್ದೇವೆ. ಮುಂದಿನ ಹಂತದಲ್ಲಿ ವೈಯಕ್ತಿಕ ಚಿಕಿತ್ಸಾಲಯಗಳನ್ನು ಅಪ್ಲಿಕೇಶನ್ನಲ್ಲಿ ಸೇರಿಸಬಹುದು” ಎಂದು ಹೇಳಿದರು.
“ಅಪ್ಲಿಕೇಶನ್ ಅಭಿವೃದ್ಧಿಯ ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಗಮನಹರಿಸಲಾಗುತ್ತದೆ. ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್ಗಳ ಮೇಲೆ ಕೇಂದ್ರೀಕರಿಸುತ್ತದೆ. ಮೊದಲ ಹಂತದಲ್ಲಿ ಆ್ಯಪ್ನಲ್ಲಿ ಸಮುದಾಯದಿಂದ ಖಾಯಿಲೆಗಳ ಡೇಟಾವನ್ನು ಸಂಗ್ರಹಿಸಲು ಆಶಾಕಾರ್ಯಕರ್ತೆಯರು ಮತ್ತು ನರ್ಸ್ಗಳ ಸಹಾಯ ಪಡೆಯಲಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
“ಆರಂಭಿಕ ಹಂತದಲ್ಲಿ ಸುಮಾರು 15 ಆಶಾ ಕಾರ್ಯಕರ್ತೆಯರು ಅಪ್ಲಿಕೇಶನ್ನಲ್ಲಿ ಡೆಂಗ್ಯೂ ಡೇಟಾವನ್ನು ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಹಂತ ಮುಗಿದ ನಂತರ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ. ಇದರಲ್ಲಿ ವೈದ್ಯಕೀಯ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳು ಮತ್ತು ರೋಗ ಕಂಡುಬಂದ ಸ್ಥಳಗಳ ಕುರಿತು ಪರಿಶೀಲಿಸುತ್ತಾರೆ. ಮೂರನೇ ಹಂತದಲ್ಲಿ ಔಷಧಿ ಸಿಂಪಡಣೆ ತಂಡವು ರೋಗ ಕಾಣಿಸಿಕೊಂಡ ಸ್ಥಳಗಳಿಗೆ ತೆರಳಿ, ಔಷಧಿ ಸಿಂಪಡಣೆ ಮಾಡುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಮಾಹಿತಿ ಆ್ಯಪ್ನಲ್ಲಿ ದಾಖಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
“ಆ್ಯಪ್ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ. ಮೊದಲ ಹಂತದ ಚಟುವಟಿಕೆಗೆ ಕೆಲವೇ ದಿನಗಳಲ್ಲಿ ಆ್ಯಪ್ ದೊರೆಯಲಿದೆ. ಇದರೊಂದಿಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಒಂದೇ ಆ್ಯಪ್ನಲ್ಲಿ ಡೆಂಗ್ಯೂ ಡೇಟಾವನ್ನು ಸಂಗ್ರಹಿಸುತ್ತೇವೆ. ಸಾಧ್ಯವಾದಷ್ಟು ಬೇಗ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಎಆರ್ಟಿಪಾರ್ಕ್ನ ಕಾರ್ಯಕ್ರಮ ನಿರ್ದೇಶಕ ಡಾ.ಭಾಸ್ಕರ್ ರಾಜಕುಮಾರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಾಹೇತರ ಸಂಬಂಧ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಪತಿ
“ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್ಗಳನ್ನು ಅಪ್ಲಿಕೇಶನ್ನಲ್ಲಿ ಸೇರಿಸಲಾಗುತ್ತದೆ. ಇದರಿಂದ ಅವರು ಪ್ರಕರಣಗಳನ್ನು ವರದಿ ಮಾಡಬಹುದು. ಇದರಿಂದ ಪರಿಪೂರ್ಣ ಡೇಟಾ ಎಲ್ಲರಿಗೂ ದೊರೆಯುತ್ತದೆ. ಯಾವುದೇ ನಕಲು ಇರುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.