- ತಹಶೀಲ್ದಾರ ಅವರು ಮಾಡಿದ ಎಡವಟ್ಟಿನಿಂದ ಮುಜುಗರಕ್ಕೀಡಾದ ಪಾಲಿಕೆ
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲವು ತಿಂಗಳು ಒತ್ತುವರಿ ತೆರವು ಕಾರ್ಯಾಚರಣೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಮಯದಲ್ಲಿ ಪ್ರವಾಹದ ಪರಿಸ್ಥಿತಿಗೆ ಕಾರಣವಾದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡಿದೆ.
ಬೆಂಗಳೂರಿನ ಸುತ್ತಮುತ್ತ ನದಿ, ಸಮುದ್ರವಿಲ್ಲ. ಆದರೂ ಮಳೆ ಆದ ಸಂದರ್ಭದಲ್ಲಿ ನಗರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಕಾರಣ ನಗರದಲ್ಲಿ ಮಳೆ ನೀರು ಹಾದುಹೋಗಲು ಇರುವ ಜಾಗವನ್ನು ಬಹುತೇಕರು ಆಕ್ರಮಣ ಮಾಡಿಕೊಂಡು ಮನೆ ಮತ್ತು ಕಟ್ಟಡಗಳನ್ನು ಕಟ್ಟಿದ್ದಾರೆ.
ಕಳೆದ ವರ್ಷ ಸುರಿದ ಮಳೆಗೆ ಇಡೀ ಬೆಂಗಳೂರಿನಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಮಹದೇವಪುರ, ಸರ್ಜಾಪುರ ರಸ್ತೆ, ಸಾಯಿ ಲೇಔಟ್, ರೇನ್ ಬೋ ಲೇಔಟ್ ಸೇರಿದಂತೆ ಇನ್ನಿತರ ಪ್ರದೇಶಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದವು.
ಹಾಗಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲವು ತಿಂಗಳು ಒತ್ತುವರಿ ತೆರವು ಕಾರ್ಯಾಚರಣೆ ಎಂದು ನಗರದಲ್ಲಿ ಬುಲ್ಡೋಜರ್ ಸದ್ದು ಮಾಡಲು ಆರಂಭಿಸಿದ್ದವು. ಈ ವೇಳೆ, ಒತ್ತುವರಿ ಆಗಿರುವ ಸಣ್ಣಪುಟ್ಟ ಶೆಡ್ಗಳು, ಕಾಂಪೌಡ್ಗಳು ಹಾಗೂ ಖಾಲಿ ಜಾಗಗಳನ್ನು ತೆರವು ಮಾಡಿ ಆ ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು.
ಇದೀಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ತೆರವು ಕಾರ್ಯಾಚರಣೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆದೇಶಿಸಿದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ನಗರದ ಮಹದೇವಪುರ ವಲಯದಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.
ಕೆಲವು ಕಟ್ಟಡಗಳಿಗೆ ಸ್ಟೇ ಆರ್ಡರ್ ಇರುವ ಹಿನ್ನಲೆ ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಸ್ಟೇ ಇಲ್ಲದ ಕಟ್ಟಡಗಳನ್ನ ಸೋಮವಾರಕ್ಕೆ ತೆರವು ಮಾಡಲು ಪಾಲಿಕೆ ಮುಂದಾಗಿದೆ.
ಮಹದೇವಪುರದ ಮುನೇನಕೊಳಲು ಬಳಿ ರಾಜಕಾಲುವೆ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಿರುವುದು ಕಂಡು ಬಂದಿದೆ.
ಸೆಪ್ಟೆಂಬರ್ನಲ್ಲಿ ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್ಗೆ ನಿವಾಸಿಗಳು ಸ್ಟೇ ಆರ್ಡರ್ ತಂದಿದ್ದರು. ಈ ಬಗ್ಗೆ ತಹಶೀಲ್ದಾರ್ ಅವರು ಬಿಬಿಎಂಪಿ ಗಮನಕ್ಕೆ ತಂದಿಲ್ಲ. ಜೂನ್ 15ರಂದು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಅವರು ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಆದರೆ, ಸಭೆಯಲ್ಲಿಯೂ ನಿವಾಸಿಗಳು ಸ್ಟೇ ತಂದಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಯಾಬ್ ಚಾಲಕರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಬಂಧನ
22 ಸ್ಥಳಗಳಲ್ಲಿ ಒತ್ತುವರಿ ಆಗಿರುವುದನ್ನು ಮಾರ್ಕ್ ಮಾಡಿಕೊಂಡು ತೆರವು ಕಾರ್ಯಾಚರಣೆ ಆರಂಭಿಸಿದ ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಸ್ಟೇ ಆರ್ಡರ್ ಕಾಪಿ ತೋರಿಸಿದ್ದಾರೆ. ಇದೀಗ, ತಹಶೀಲ್ದಾರ್ ಅವರು ಮಾಡಿದ ಎಡವಟ್ಟಿನಿಂದ ಪಾಲಿಕೆ ಮುಜುಗರಕ್ಕಿಡಾಗಿದೆ.