ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ 10 ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶದ ಮೇರೆಗೆ ಶಾಲೆ ಬಂದ್ ಮಾಡಲಾಗಿದೆ.
ಆರೋಪಿ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ ಕೋರಮಂಗಲದಲ್ಲಿ ಶಾಲೆ ಕಟ್ಟಲು ಅನುಮತಿ ಪಡೆದಿದ್ದನು. ಆದರೆ, ಅನಧಿಕೃತವಾಗಿ ಬೆಂಗಳೂರಿನ ವರ್ತೂರು ಸಮೀಪ ಶಾಲೆ ನಿರ್ಮಾಣ ಮಾಡಿದ್ದಾನೆ.
ಅನಧಿಕೃತವಾಗಿ ಶಾಲೆ ನಿರ್ಮಾಣ ಮಾಡಿದ ಹಿನ್ನೆಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಬಂದ್ ಮಾಡುವಂತೆ ಆದೇಶಿಸಿದ್ದಾರೆ. ಇದರಿಂದ 140ಕ್ಕೂ ಹೆಚ್ಚಿನ ಮಕ್ಕಳ ಮುಂದಿನ ಶಿಕ್ಷಣದ ಭವಿಷ್ಯ ಅತಂತ್ರವಾಗಿದೆ.
“ಮಕ್ಕಳ ಮುಂದಿನ ಶಿಕ್ಷಣದ ಭವಿಷ್ಯಕ್ಕೆ ಯಾವುದೇ ತೊಂದರೆ ಉಂಟಾಗಬಾರದು. ಹಾಗಾಗಿ, ಪಾಲಕರು ಹೇಳಿದ ಶಾಲೆಯಲ್ಲಿ ಸರ್ಕಾರದಿಂದ ದರ ನಿಗದಿ ಮಾಡಿ ಸೀಟ್ ವ್ಯವಸ್ಥೆ ಮಾಡಲಾಗುವುದು” ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರಾಳ ಶನಿವಾರ | ರಾಜ್ಯದಲ್ಲಿ ಅಪಘಾತಗಳಿಂದ 37 ಸಾವು ; ಎಡಿಜಿಪಿ ಟ್ವೀಟ್
ಏನಿದು ಪ್ರಕರಣ?
ನಗರದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕಿಯನ್ನು ಶಾಲಾ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ (65) ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.
ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ನರ ದೌರ್ಬಲ್ಯ ಖಾಯಿಲೆಯಿಂದ ಬಳಲುತ್ತಿದ್ದಳು. ಆಗಸ್ಟ್ 3ರ ಬೆಳಗ್ಗೆ 8.30ಕ್ಕೆ ಬಾಲಕಿ ಶಾಲೆಗೆ ತೆರಳಿದ್ದಾಳೆ. 11.30ಕ್ಕೆ ಶಾಲೆಯಿಂದ ತನ್ನ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಐಸ್ಕ್ರೀಂ ಕೊಟ್ಟು ಕಳುಹಿಸಿದ್ದನು.
ಮಧ್ಯಾಹ್ನ 3.30ಕ್ಕೆ ಶಾಲೆಯಿಂದ ಮನೆಗೆ ವಾಪಸ್ಸಾಗಿದ್ದ ಬಾಲಕಿ, ತಾಯಿಗೆ ಹೊಟ್ಟೆ ನೋವು ಎಂದು ಹೇಳಿದ್ದಳು. ಸ್ನಾನ ಮಾಡಿಸಿ ಕರೆತರುವಾಗ ರಕ್ತದ ಕಲೆಗಳು ಕಂಡುಬಂದಿದೆ. ಇದೇ ವಿಚಾರವಾಗಿ ಮಗುವನ್ನು ತಾಯಿ ಕೇಳಿದಾಗ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ.
ಈ ಘಟನೆ ಸಂಬಂಧ ಬಾಲಕಿ ತಾಯಿ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.