- ಕಲೆಯನ್ನು ಜನರ ಸಮಸ್ಯೆಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಾದಲ್
- ಆಡಳಿತದ ಗಮನ ಸೆಳೆಯಲು ಹಲವಾರು ರೀತಿಯಲ್ಲಿ ವಿನೂತವಾಗಿ ಹೋರಾಟ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ. ಈಗಲೂ ಹಲವು ರಸ್ತೆಗಳಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ಇತ್ತೀಚೆಗೆ ಮಳೆ ಸುರಿದ ಪರಿಣಾಮ ಅವುಗಳು ಮತ್ತಷ್ಟು ಹಿಗ್ಗಿವೆ. ಮುಖ್ಯರಸ್ತೆಗಳಲ್ಲಿ ದೊಡ್ಡ ಗುಂಡಿಗಳು ವಾಹನ ಸವಾರರನ್ನು ಬಲಿಪಡೆಯಲು ಕಾಯುತ್ತಿವೆ. ನಗರದಲ್ಲಿ ಬಹುತೇಕ ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಎನ್ನುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಣ್ಣಿಗೆ ಈ ಗುಂಡಿಗಳು ಕಾಣುತ್ತಿಲ್ಲವೆಂಬುದು ದುರದೃಷ್ಟಕರ ಸಂಗತಿ.
ರಸ್ತೆಗುಂಡಿಗಳ ವಿರುದ್ಧ ಬಿಬಿಎಂಪಿಯ ಅಧಿಕಾರಿಗಳ ಗಮನ ಸೆಳೆಯಲು ಕಲೆಯ ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಾ ಬಂದಿರುವ ಕಲಾವಿದ ಬಾದಲ್ ನಂಜುಂಡಸ್ವಾಮಿ, ಇದೀಗ ಮತ್ತೊಂದು ವಿಶೇಷ ಪ್ರಯೋಗಕ್ಕೆ ಕೈಹಾಕಿದ್ದಾರೆ.
ನಗರದ ದಿಣ್ಣೂರು ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿಯೊಂದು ಬಿದ್ದಿದ್ದು, ಬಿಬಿಎಂಪಿಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ, ಗುಂಡಿಯನ್ನೂ ಮುಚ್ಚಿಲ್ಲ. ವಾಹನ ಸವಾರರು ಅದೇ ರಸ್ತೆಗುಂಡಿಯಲ್ಲಿ ವಾಹನ ಚಾಲನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದೀಗ ಬಾದಲ್ ನಂಜುಂಡಸ್ವಾಮಿ ಅವರು ರಚಿಸಿರುವ ಚಿತ್ರದಲ್ಲಿ ಮೆಡಲ್‌ಗಳನ್ನು ಬೃಹತ್ ರಸ್ತೆ ಗುಂಡಿಯಲ್ಲಿ ಎಸೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೃತಿಯ ಮೂಲಕ ಜನರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಾದಲ್ ನಂಜುಂಡಸ್ವಾಮಿ ಅವರು, “ನನ್ನನ್ನು ಹೊರತುಪಡಿಸಿ ಈ ಪದಕಗಳನ್ನು ಇಲ್ಲಿ ಎಸೆಯಲು ಯಾರೂ ಇಷ್ಟಪಡುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಹಲವು ಜನ ಪ್ರತಿಕ್ರಿಯೆ ನೀಡಿದ್ದು, “ಬಿಬಿಎಂಪಿ ಅಧಿಕಾರಿಗಳು ಕಣ್ಣಿದ್ದೂ ಕರುಡಾಗಿರುವುದು ಯಾಕೆ? ಕಳಪೆ ಗುಣಮಟ್ಟದ ಕೆಲಸಗಳು, ಅದನ್ನ ರಿಪೇರಿ ಮಾಡಿಸುವ ಹೊಣೆ ಬ್ಲಾಕ್ ಮಟ್ಟದಲ್ಲಿ ಯಾಕೆ ವಹಿಸುತ್ತಿಲ್ಲ? ಎಲ್ಲದಕ್ಕೂ ಹಣವಿಲ್ಲ ಎಂದು ನೆಪವೊಡ್ಡಿ ಕೈಚೆಲ್ಲುವುದೂ ಸರಿಯಲ್ಲ” ಎಂದು ಸಮಂತ್ ಕೆರೂರ ಎಂಬುವವರು ಟ್ವೀಟ್ ಮಾಡಿದ್ದಾರೆ.
ಜಗತ್ ಎಂಬುವವರು, “ನಮ್ಮ ಜನ ಇದನ್ನೂ ನಿಜವಾದ ಬಂಗಾರದ ಪದಕ ಎಂದು ಎತ್ತಿಕೊಂಡು ಹೋಗುತ್ತಾರೆ” ಎಂದಿದ್ದಾರೆ.
ಯಾರಿದು ಬಾದಲ್ ನಂಜುಂಡಸ್ವಾಮಿ?
ಕರ್ನಾಟಕ ಮೂಲದ ಬಾದಲ್ ನಂಜುಂಡಸ್ವಾಮಿ ಅವರು ಚಿತ್ರ ಕಲಾವಿದ, ಕಲಾನಿರ್ದೇಶಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ, ಕಲಾನಿರ್ದೇಶಕರಾಗಿ ದುಡಿದಿದ್ದಾರೆ.
ಇವರು ತಮ್ಮ ಕಲೆಯ ಮೂಲಕ ಸಾಮಾಜಿಕ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಿದ್ದಾರೆ. ಪ್ರಭುತ್ವದ ಗಮನ ಸೆಳೆಯುತ್ತಿದ್ದಾರೆ. ಬಾದಲ್ ಅವರು ಸುಮಾರು 12-13 ವರ್ಷಗಳ ಹಿಂದೆ, ಮೈಸೂರು ಅರಮನೆಯ ಸಮೀಪ ನಗರದ ರಸ್ತೆಗಳ ದುಸ್ಥಿತಿಯನ್ನು ಬಿಂಬಿಸುವ ಉದ್ದೇಶದಿಂದ ಈಜುಕೊಳದ ಚಿತ್ರ ಬಿಡಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಫುಡ್ ಡೆಲಿವರಿ ಬಾಯ್
ರಾಜಧಾನಿಯಲ್ಲಿ ರಸ್ತೆಗುಂಡಿಗಳಿರುವ ಹಲವು ಕಡೆ ಚಿತ್ರಗಳನ್ನು ಬಿಡಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದರು. ನಾಗರಿಕರ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಮಾಡಲು ಕಲೆಯನ್ನು ಬಳಸಿಕೊಂಡಿದ್ದರು.