ಮಧ್ಯವರ್ತಿಗಳನ್ನು ದಾಟಿ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗಲಿ: ಸಚಿವ ಡಾ. ಎಚ್ ಸಿ ಮಹದೇವಪ್ಪ

ಎಚ್‌ ಸಿ ಮಹದೇವಪ್ಪ
  • ಎಸ್‌ಸಿಪಿ ಅನುದಾನ ಬೇರೆ ಇಲಾಖೆಗೆ ವರ್ಗಾಯಿಸುವುದು ಬೇಡ
  • ಅನುದಾನವನ್ನು ಪರಿಶಿಷ್ಟ ಜನರ ಏಳಿಗೆಗೆ ಮಾತ್ರವೇ ಬಳಸಿ

ಎಸ್‌ಸಿಪಿ ಅನುದಾನ ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾಯಿಸದೇ ಪರಿಶಿಷ್ಟರ ಏಳಿಗೆಗೆ ಬಳಸಬೇಕು ಮತ್ತು ಯೋಜನೆಯ ಅನುಕೂಲ ಮಧ್ಯವರ್ತಿಗಳನ್ನು ದಾಟಿ ನಿಜವಾದ ಫಲಾನುಭವಿಗಳಿಗೆ ದೊರಕಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಸ್‌ ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಸರ್ಕಾರದ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿ ಎಸ್‌ಸಿಪಿ ಯೋಜನೆಯಡಿಯಲ್ಲಿ ಎಲ್ಲ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಯಾವ ಇಲಾಖೆಯವರು ಯಾವ ರೀತಿಯ ಯೋಜನೆ ರೂಪಿಸಿದರೆ ಎಸ್‌ಸಿಪಿ ಯೋಜನೆಯ ಹಣದ ಸದ್ಬಳಕೆ ಸಾಧ್ಯ ಎಂಬುದನ್ನೂ ತಿಳಿಸಿಕೊಟ್ಟರು. ಅದರಲ್ಲೂ ಪರಿಶಿಷ್ಟ ಜಾತಿಯ ಜನರ ಶಿಕ್ಷಣ, ಆರೋಗ್ಯ, ಆಹಾರ, ಕೌಶಲ್ಯ ತರಬೇತಿಯೊಂದಿಗೆ ಅವರ ಘನತೆಯ ಬದುಕಿಗೆ ಪೂರಕವಾಗಿ ಆಡಳಿತವನ್ನು ನೀಡಬೇಕೆಂದು ಸಚಿವರು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಏಳಿಗೆಗಾಗಿ ಈ ಹಿಂದೆ ಜಾರಿಗೊಳಿಸಲಾಗಿದ್ದ ಎಸ್‌ಸಿಪಿ ಕಾಯ್ದೆಯ ಹಣವನ್ನು ಈ ಹಿಂದೆ ಬೇರೆ ಇಲಾಖೆಗಳಿಗೆ ವರ್ಗಾಯಿಸಿರುವುದು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದೆ. ಕಾಯ್ದೆಯ ನಿಯಮಾವಳಿಯಂತೆ ಅನುದಾನವನ್ನು ಪರಿಶಿಷ್ಟ ಜಾತಿಯ ಜನರ ಏಳಿಗೆಗೆ ಮಾತ್ರವೇ ಬಳಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ ಯೋಜನೆ ಜಾರಿಗೆ ಪ್ರತ್ಯೇಕ ಆ್ಯಪ್ ಸಿದ್ಧ, ಆ. 17ರಿಂದ ಅರ್ಜಿ ಸ್ವೀಕಾರ: ಲಕ್ಷ್ಮಿ ಹೆಬ್ಬಾಳ್ಕರ್‌

ಕಾಯ್ದೆಗಳನ್ನು ಮಾಡುವುದು ಜನರ ಅನುಕೂಲಕ್ಕಾಗಿಯೇ ಹೊರತು ಉಲ್ಲಂಘಿಸಲು ಅಲ್ಲ. ಈ ಹಿನ್ನೆಲೆ ಎಸ್‌ಸಿಪಿ ಕಾಯ್ದೆಯಡಿ ನಿಗದಿ ಪಡಿಸಿರುವ ಅನುದಾನವನ್ನು ಎಲ್ಲ ಇಲಾಖೆಗಳು ಸಮರ್ಥವಾಗಿ ಬಳಸಿಕೊಂಡು ಜನರ ಬದುಕಿಗೆ ಸಹಾಯ ಮಾಡಬೇಕು. ಜೊತೆಗೆ ಎಲ್ಲ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಎಲ್ಲ ಇಲಾಖೆಗಳಲ್ಲಿ ಎಸ್‌ಸಿಪಿ ಉದ್ದೇಶಕ್ಕಾಗಿ ಇರುವ ಅನುದಾನದ ಬಳಕೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here