- ಯಶಸ್ವಿಯಾಗಿ ಅನ್ನನಾಳ ಮರುನಿರ್ಮಾಣ ಮಾಡಿದ ಫೋರ್ಟೀಸ್ ಆಸ್ಪತ್ರೆಯ ವೈದ್ಯರು
- ಕಿರಿದಾಗಿದ್ದ ಅನ್ನನಾಳ ತೆರವುಗೊಳಿಸಿ, ನೇರವಾಗಿ ಮಗುವಿನ ಸಣ್ಣ ಕರುಳಿಗೆ ಟ್ಯೂಬ್ ಅಳವಡಿಕೆ
ಆರು ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಫ್ಲೋರ್ ಕ್ಲೀನರ್ ಲಿಕ್ವಿಡ್ ಕುಡಿದ ಪರಿಣಾಮ ಮಗುವಿನ ಅನ್ನನಾಳ ಸಂಪೂರ್ಣ ಸುಟ್ಟುಹೋಗಿತ್ತು. ಇದೀಗ ಫೋರ್ಟೀಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಅನ್ನನಾಳ ಮರುನಿರ್ಮಾಣ ಮಾಡಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯ ಚೀಫ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ ಅವರ ತಂಡ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಬಗ್ಗೆ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಚೀಫ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಶ್ ಜೋಶಿ, “ಆರು ವರ್ಷದ ಪುಟ್ಟ ಬಾಲಕಿ ಮನೆಯಲ್ಲಿ ಆಟವಾಡುವಾಗ ಪಕ್ಕದಲ್ಲಿಯೇ ಇದ್ದ ಫ್ಲೋರ್ ಕ್ಲೀನರ್ ಲಿಕ್ವಿಡ್ ಅನ್ನು ಆಕಸ್ಮಿಕವಾಗಿ ಕುಡಿದಿದೆ. ಇದರಿಂದ ಮಗುವಿನ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿತ್ತು” ಎಂದು ತಿಳಿಸಿದರು.
“ಪೋಷಕರು ಬಾಲಕಿಯನ್ನು ಕೂಡಲೇ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿನ ಅನ್ನನಾಳ ಹಾಗೂ ಸಣ್ಣ ಕರುಳು ಸಂಪೂರ್ಣ ಸುಟ್ಟ ಕಾರಣ ಹಾನಿಗೊಳಗಾದ ಆಹಾರ ಪೈಪ್ನ ಒಂದು ಭಾಗವನ್ನು ತೆಗೆದು, ಟ್ಯೂಬ್ ಮುಖಾಂತರ ಮಗುವಿನ ಸಣ್ಣ ಕರುಳಿಗೆ ನೇರವಾಗಿ ಆಹಾರ ನೀಡಲು ವ್ಯವಸ್ಥೆ ಮಾಡಲಾಗಿತ್ತು” ಎಂದರು.
“ಕಳೆದ ಎರಡು ವರ್ಷಗಳಿಂದ ದೇಹದ ಹೊರಭಾಗದಿಂದ ಹೆಚ್ಚುವರಿಯಾಗಿ ಫೀಡಿಂಗ್ ಟ್ಯೂಬ್ ಅಳವಡಿಸಿದ್ದು, ಬಾಲಕಿ ಅದರ ಸಹಾಯದಿಂದಲೇ ಆಹಾರ ಸೇವನೆ ಮಾಡಬೇಕಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇದೂ ಸಹ ಮಗುವಿಗೆ ಕಷ್ಟವಾಗುತ್ತಿತ್ತು. ಹೀಗಾಗಿ, ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಓಸೊಫಾಗೊ-ಗ್ಯಾಸ್ಟ್ರೋ-ಡ್ಯುಯೊಡೆನೊಸ್ಕೋಪಿಗೆ ಒಳಪಡಿಸಿ, ಮೇಲ್ಭಾಗದ ಜೀರ್ಣಾಂಗ ವ್ಯವಸ್ಥೆಯನ್ನು ಮೈಕ್ರೋ ಕ್ಯಾಮರಾದ ಮೂಲಕ ಪರೀಕ್ಷಿಸಲಾಯಿತು” ಎಂದು ಹೇಳಿದರು.
“ಮಗುವಿನ ಅನ್ನನಾಳ ಹಾಗೂ ಸಣ್ಣಕರುಳು ಸುಟ್ಟ ಪರಿಣಾಮ ತೀರ ಕಿರಿದಾಗಿತ್ತು. ಹೀಗಾಗಿ, ಅನ್ನನಾಳದ ಪುನರ್ ನಿರ್ಮಾಣಕ್ಕೆ ಮಕ್ಕಳ ತಜ್ಞರು ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ಗಳು, ಅರವಳಿಕೆ ತಜ್ಞರ ಸಹಕಾರದೊಂದಿಗೆ ಮಗುವಿನ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಈಗಾಗಲೇ ಸಂಪೂರ್ಣವಾಗಿ ಸುಟ್ಟು, ಕಿರಿದಾಗಿದ್ದ ಅನ್ನನಾಳವನ್ನು ತೆರವುಗೊಳಿಸಿ, ಟ್ಯೂಬ್ನನ್ನು ನೇರವಾಗಿ ಮಗುವಿನ ಸಣ್ಣ ಕರುಳಿಗೆ ಅಳವಡಿಸಲಾಗಿದೆ. ಈ ಮೂಲಕ ಅನ್ನನಾಳವನ್ನು ಮರುನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಮಗುವು ಯಾವುದೇ ಟ್ಯೂಬ್ ಇಲ್ಲದೆಯೂ ಸಹ ಆಹಾರವನ್ನು ಬಾಯಿಯ ಮೂಲಕ ಸೇವಿಸಬಹುದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಸವಾರರೊಂದಿಗೆ ಹಂಚಿಕೊಳ್ಳಬೇಡಿ ಎಂದ ರ್ಯಾಪಿಡೋ
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, “ಆರು ವರ್ಷದ ಬಾಲಕಿಗೆ ಮರುಜೀವ ನೀಡುವಲ್ಲಿ ನಮ್ಮ ವೈದ್ಯರ ಶ್ರಮ ಶ್ಲಾಘನೀಯ. ನಮ್ಮ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳಿಂದ ಯಾವುದೇ ಸವಾಲಿನ ಪ್ರಕರಣಗಳಾದರೂ ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಯಾವ ವಯಸ್ಸಿನ ಪ್ರಕರಣಗಳೇ ಆದರೂ ಅದನ್ನು ನಿಭಾಯಿಸಲು ಸಮರ್ಥವಾಗಿದ್ದೇವೆ” ಎಂದು ಹೇಳಿದರು.